ಪುತ್ತೂರು: ಬಿಜೆಪಿಯವರು ಚುನಾವಣೆ ಸಮೀಪಿಸುತ್ತಿರುವಂತೆ ಕೋಮುಗಲಭೆ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಅದಕ್ಕೆ ಬಲಿಯಾಗುವವರು ಮಾತ್ರ ಬಡವರ, ಹಿಂದುಳಿದ ವರ್ಗದವರ ಮಕ್ಕಳು. ಕೋಮು ಭಾವನೆ ಸೃಷ್ಟಿಸುವವರ ಮಕ್ಕಳು ಇಂತಹ ಕೃತ್ಯಗಳಿಗೆ ಬಲಿಯಾಗುವುದಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಹಿಂದೂಗಳೇ. ಹಿಂದುತ್ವದ ಪಾಠವನ್ನು ಇವರಿಂದ ಕಲಿಯಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದರು.
ಕಿಲ್ಲೆ ಮೈದಾನದಲ್ಲಿ ನಡೆದ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾ ಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತ ನಾಡಿದರು.
ರಾಜ್ಯಕ್ಕೆ ಬಂದ ರಾಷ್ಟ್ರಪತಿಯವರು ಟಿಪ್ಪು ಸುಲ್ತಾನ್‌ನನ್ನು ಹೊಗಳಿ ಭಾಷಣ ಮಾಡಿದ್ದರು. ಟಿಪ್ಪು ಜಯಂತಿಯನ್ನು ವಿರೋಧಿಸುವವರು ಆಗಲಾದರೂ ಬುದ್ಧಿ ಕಲಿಯಬೇಕಿತ್ತು. ಅವರದು ಕಾಮಾಲೆ ಕಣ್ಣು. ಅದೇ ಕನ್ನಡಕ ಹಾಕಿಕೊಂಡು ಅವರು ಸಮಾಜವನ್ನು ನೋಡುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ರಾದ ಬಿ. ರಮಾನಾಥ ರೈ, ಯು.ಟಿ. ಖಾದರ್, ಸರಕಾರದ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಡಾ| ಕೃಪಾ ಅಮರ್ ಆಳ್ವ, ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ , ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಅನಿತಾ ಹೇಮನಾಥ ಶೆಟ್ಟಿ , ಮಂಜುಳಾ ಮಾಧವ ಮಾವೆ, ಪಿ.ಪಿ. ವರ್ಗೀಸ್ ಮೊದಲಾದವರು ಉಪಸ್ಥಿತರಿದ್ದರು.
66.86 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಯನ್ನು ರಿಮೋಟ್ ಒತ್ತುವ ಮೂಲಕ ಉದ್ಘಾಟಿಸಲಾಯಿತು. ಇದೇ ಸಂದರ್ಭ ವಿವಿಧ ಸೌಲಭ್ಯಗಳ ಹಕ್ಕುಪತ್ರ ವಿತರಣೆ ಮಾಡ ಲಾಯಿತು. ಪ್ರಭಾರ ಸಹಾಯಕ ಆಯುಕ್ತೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಎಂ.ಆರ್. ರವಿ ಸ್ವಾಗತಿಸಿ, ತಹಶೀಲ್ದಾರ್ ಅನಂತಶಂಕರ ವಂದಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ನಿರೂಪಿಸಿದರು.
ಶಕುಂತಳಾ ಶೆಟ್ಟಿ ಅಭ್ಯರ್ಥಿ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಶಕುಂತಳಾ ಶೆಟ್ಟಿ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಲಿದೆ ಎಂಬ ವದಂತಿ ಹಬ್ಬುತ್ತಿದ್ದರೆ ಇಂದಿನ ಸಮಾವೇಶ ಇದಕ್ಕೆ ಉತ್ತರ ನೀಡುವಂತಿತ್ತು.
ಸಿದ್ದರಾಮಯ್ಯ ಮಾತನಾಡುತ್ತಾ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಂತೆಯೇ ಮುಂದಿನ ಚುನಾವಣೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಯಲ್ಲೂ ಶಕುಂತಳಾ ಅವರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದು ಖಚಿತವಾಯಿತು.