ಕಲಬುರಗಿ: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಕಲಬುರಗಿ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಐದು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಆದರೆ, ರೈಲ್ವೆ ನಿಲ್ದಾಣದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಇನ್ನೂ ಆರಂಭಿಸಿಲ್ಲ.
ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ, ಖಜೂರಿ, ನಿಂಬಾಳ ಹಾಗೂ ಅಫಜಲಪುರ ತಾಲೂಕಿನ ಮಾಶಾಳ, ಬಳೂರ್ಗಿ ಸಮೀಪ ಹೊಂದಿಕೊಂಡ ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಜನರ ತಪಾಸಣೆ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಕೋವಿಡ್ ಭೀತಿ: ವಿಜಯಪುರ ಜಿಲ್ಲಾಡಳಿತದಿಂದ ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ
ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶ ಪಡೆಯಲು ಕಡ್ಡಾಯವಾಗಿ ಕಳೆದ 72 ಗಂಟೆಯಲ್ಲಿ ಪಡೆದ ಆರ್ ಟಿಪಿಸಿಆರ್ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹಾಜರುಪಡಿಸಬೇಕು. ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ನೀಡದಿರಲು ಜಿಲ್ಲಾಡಳಿತ ಸೂಚಿಸಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮಧ್ಯರಾತ್ರಿಯಿಂದಲೇ ಕಟ್ಟೆಚ್ಚರ ವಹಿಸಬೇಕಿತ್ತು. ಆದರೆ, ಸೋಮವಾರ ಮಧ್ಯಾಹ್ನದವರೆಗೂ ಮಹಾರಾಷ್ಟ್ರ ಮತ್ತು ಕಲಬುರಗಿ ಮಧ್ಯೆ ಜನರ ಸಂಚಾರ ಯಾವುದೇ ನಿರ್ಬಂಧವಿಲ್ಲದೇ ನಡೆಯಿತು. ಮಹಾರಾಷ್ಟ್ರದಿಂದ ಬಸ್ ಗಳು ಸಹ ಮುಕ್ತವಾಗಿ ಸಂಚರಿಸಿದವು. ಮಧ್ಯಾಹ್ನದ ನಂತರ ಚೆಕ್ ಪೋಸ್ಟ್ ಗಳನ್ನು ತೆರೆಯಲಾಯಿತು.
20 ರೈಲುಗಳ ಸಂಚಾರ: ಕಲಬುರಗಿ ಮೂಲಕ ನಿತ್ಯ 20 ರೈಲುಗಳು ಸಂಚರಿಸುತ್ತಿವೆ. ಇದರಲ್ಲಿ ಸೊಲ್ಲಾಪುರದಿಂದ ಒಂದು ಮತ್ತು ಮುಂಬೈ ಒಂದರಿಂದಲೇ ಸುಮಾರು 16 ರೈಲುಗಳು ಆಗಮಿಸುತ್ತವೆ. ಆದರೂ, ಸೋಮವಾರ ಸಂಜೆ 4 ಗಂಟೆಯಾದರೂ ಜಿಲ್ಲಾಡಳಿತದಿಂದ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ.
ಇದನ್ನೂ ಓದಿ:ಲಂಚ ಪಡೆಯುತ್ತಿದ್ದ ಗುರುಮಠಕಲ್ ತಹಶೀಲ್ದಾರ್ ಎಸಿಬಿ ಬಲೆಗೆ
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಎರಡು- ಮೂರು ದಿನಗಳಿಂದ ರೈಲ್ವೆ ಇಲಾಖೆಯಿಂದಲೇ ಥರ್ಮಲ್ ಸ್ಕ್ರೀನಿಂಗ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಆರ್ ಟಿಪಿಸಿಆರ್ ವರದಿ ಪರಿಶೀಲನೆ ಮಾಡುತ್ತಿಲ್ಲ. ಸೋಮವಾರದಿಂದ ಜಿಲ್ಲಾಡಳಿತ ಆರ್ ಟಿಪಿಸಿಆರ್ ವರದಿ ಪರಿಶೀಲನೆಗೆ ಸಿಬ್ಬಂದಿ ನೇಮಿಸುವುದಾಗಿ ಹೇಳಿತ್ತು. ಇದಕ್ಕಾಗಿ ರೈಲುಗಳ ಸಂಚಾರದ ವೇಳೆ ಪಟ್ಟಿ ಮತ್ತು ಮಾಹಿತಿಯನ್ನು ರವಿವಾರವೆ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.