Advertisement
ರಾಜ್ಯದಲ್ಲಿ ಡ್ಯಾನ್ಸ್ ಬಾರ್‌ಗಳು ಪುನರಾರಂಭಗೊಳ್ಳಲು ಅವಕಾಶ ನೀಡದಿರುವ ಕ್ರಮವಾಗಿ ರಾಜ್ಯ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ಜನವರಿವರೆಗೆ ಮುಂದೂಡಲಾಗಿರುವುದರಿಂದ ಸದ್ಯಕ್ಕಂತೂ ನಗರದಲ್ಲಿ ಮತ್ತೆ ಡ್ಯಾನ್ಸ್ ಬಾರ್‌ಗಳು ತಲೆಎತ್ತುವ ಸಾಧ್ಯತೆಗಳು ದೂರವಾಗಿವೆ. ಡ್ಯಾನ್ಸ್ ಬಾರ್ ಅಸೋಸಿಯೇಶನ್ ರಾಜ್ಯ ಸರಕಾರ ರೂಪಿಸಿರುವ ಕಾನೂನಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಇನ್ನೊಂದು ಪ್ರಮುಖ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಡ್ಯಾನ್ಸ್ ಬಾರ್ ಮಾಲಕರ ಅರ್ಜಿಯ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಬಾರ್ ಮಾಲಕರ ಪರ ವಕೀಲರಾದ ಸತ್ಯಜಿತ್ ಸಾಹಾ ತಿಳಿಸಿದರು.
2016ರ ನ. 24ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ ಈಗಾಗಲೇ ನಗರದಲ್ಲಿ ಲೈಸೆನ್ಸ್ ನೀಡಲಾಗಿರುವ ಮೂರು ಡ್ಯಾನ್ಸ್ ಬಾರ್‌ಗಳ ಮಾದರಿಯಲ್ಲಿ ನಿಯಮಾವಳಿಗಳನ್ನು ಪಾಲಿಸುವ ಭರವಸೆ ನೀಡುವ ಬಾರ್‌ಗಳ ಮಾಲಕರು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಂತೆ ಜುಲೈವರೆಗೆ ನಗರ ಪೊಲೀಸರಿಗೆ 79 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಸ್ಥಳೀಯ ಪ್ರದೇಶಗಳ ಠಾಣೆಗಳ ಪೊಲೀಸರು ನಕಾರಾತ್ಮಕ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದಿಂದ ಅಂಗೀಕರಿಸಲ್ಪಟ್ಟ 26 ಷರತ್ತುಗಳನ್ನು ಈಡೇರಿಸುವಲ್ಲಿ ಅರ್ಜಿದಾರರು ವಿಫಲವಾದ್ದರಿಂದ ಈ ಅರ್ಜಿ ತಿರಸ್ಕರಿಸ ಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಬಾರ್ ಮಾಲಕರ ಅಸಮಾಧಾನ
ಆದರೆ ಮುಂಬಯಿ ಪೊಲೀಸರ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ ಬಾರ್ ಮಾಲಕರು ಪೊಲೀಸರು ಡ್ಯಾನ್ಸ್ ಬಾರ್‌ಗಳಿಗೆ ಲೈಸೆನ್ಸ್ ನೀಡಲು ನಿರಾಸಕ್ತಿಯನ್ನು ತಾಳಿರುವುದರಿಂದ ಸಕಾರಣಗಳಿಲ್ಲದೇ ನಮ್ಮ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ದೂರಿದ್ದಾರೆ. ಲೈಸೆನ್ಸ್ ನೀಡಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬಾರ್ ಆವರಣಗಳ ಪರಿಶೀಲನೆಗಾಗಿ ನ್ಯಾಯಾಲಯದಿಂದ ಸ್ವತಂತ್ರ ಮಂಡಳಿಯೊಂದನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.