ಮುಂಬೈ: ಟೆಸ್ಟ್ ತಂಡದಿಂದಲೂ ಬೇರ್ಪಟ್ಟಿರುವ ಮಾಜಿ ಉಪ ನಾಯಕ ಅಜಿಂಕ್ಯ ರಹಾನೆ ಮತ್ತು ವೇಗಿ ಇಶಾಂತ್ ಶರ್ಮಾ ಅವರನ್ನು ಈ ವರ್ಷದ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಇನ್ ಫಾರ್ಮ್ ಆಟಗಾರರಾದ ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಕಾಂಟ್ರ್ಯಾಕ್ಟ್ ನಲ್ಲಿ ಪ್ರಮೋಶನ್ ಸಿಗಲಿದೆ ಎನ್ನಲಾಗಿದೆ.
ಮುಂದಿನ ಟಿ20 ನಾಯಕ ಎಂದೇ ಗುರುತಿಸಲ್ಪಡುವ ಹಾರ್ದಿಕ್ ಪಾಂಡ್ಯ ಅವರು ಸಿ ಗುಂಪಿನಿಂದ ಬಿ ಗ್ರೂಪ್ ಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ಇದೇ ವೇಳೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರನ್ನು ಒಪ್ಪಂದದಿಂದ ಕೈಬಿಡುವುದು ಬಹುತೇಕ ನಿಶ್ಚಿತವಾಗಿದೆ. ಟೆಸ್ಟ್ ಕೀಪರ್ ಆಗಿದ್ದ ಸಾಹಾ ಅವರನ್ನು ಸದ್ಯ ಆಯ್ಕೆ ಮಾಡುವುದನ್ನೂ ಬಿಸಿಸಿಐ ನಿಲ್ಲಿಸಿದೆ. ರಿಷಭ್ ಪಂತ್ ಮತ್ತು ಕೆಎಸ್ ಭರತ್ ಅವರೇ ಟೆಸ್ಟ್ ಕೀಪರ್ ಗಳಾಗಿದ್ದಾರೆ.
ಇದನ್ನೂ ಓದಿ:ಸಂಸದರ ನಿಧಿಯಿಂದ ದೇವಸ್ಥಾನಗಳಲ್ಲಿ ಭಜನೆ- ಕೀರ್ತನೆ ಮಾಡಿ: ಬಿಜೆಪಿ ಸಂಸದ ವೀರೇಂದ್ರ ಸಿಂಗ್
“ಸೂರ್ಯ ಕುಮಾರ್ ಅವರು ಸಿ ಗುಂಪಿನಲ್ಲಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಅವರು ನೀಡುತ್ತಿರುವ ಪ್ರದರ್ಶನದ ಕಾರಣ ಕನಿಷ್ಠ ಬಿ ಗ್ರೂಪ್ ಗೆ ಅವರು ಬಡ್ತಿ ಪಡೆಯಬಹುದು. ಅವರು ಪ್ರಸ್ತುತ ಟಿ20ಯಲ್ಲಿ ವಿಶ್ವ ನಂ. 1 ಬ್ಯಾಟರ್ ಆಗಿದ್ದಾರೆ. ಅಲ್ಲದೆ ಏಕದಿನ ತಂಡದಲ್ಲಿಯೂ ಸಹ ಗಂಭೀರ ಸ್ಪರ್ಧಿಯಾಗಿದ್ದಾರೆ,” ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಸದ್ಯ ಸತತ ಅವಕಾಶ ಪಡೆಯುತ್ತಿರುವ ಶುಭ್ಮನ್ ಗಿಲ್, ಗ್ರೂಪ್ ಸಿ ನಿಂದ ಬಿ ಗೆ ಬಡ್ತಿ ಪಡೆಯಬಹುದು.
ಎ+ ಒಪ್ಪಂದವು 7 ಕೋಟಿ ರೂ., ಗ್ರೂಪ್ ಎ ರೂ. 5 ಕೋಟಿ, ಗ್ರೂಪ್ ಬಿ ರೂ. 3 ಕೋಟಿ ಮತ್ತು ಗ್ರೂಪ್ ಸಿ ಕ್ರಿಕೆಟಿಗರಿಗೆ 1 ಕೋಟಿ ರೂ. ವೇತನ ಸಿಗಲಿದೆ.