Advertisement

ರಾಜ್ಯದ ಏಳು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸ್ಮಶಾನವೇ ಇಲ್ಲ!

08:13 AM May 13, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷದಿಂದ ಕೊರೊನಾ ಮಹಾಮಾರಿ ನಿರಂತರವಾಗಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ.  ಆದರೆ, ರಾಜ್ಯದಲ್ಲಿ ಸಾವಿಗೀಡಾದವರನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಸುಮಾರು 7064 ಗ್ರಾಮಗಳಲ್ಲಿ  ಸ್ಮಶಾನವೇ ಇಲ್ಲ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃತ ಸ್ಮಶಾನ ಇಲ್ಲದೇ ಈಗಲೂ ರಾಜ್ಯದ ಸುಮಾರು 7 ಸಾವಿರ ಕಂದಾಯ  ಗ್ರಾಮಗಳಲ್ಲಿ ಅರಣ್ಯ ಪ್ರದೇಶ,  ಗೋಮಾಳ, ನದಿ, ಹಳ್ಳ, ಕೆರೆಯ ದಂಡೆ, ರಸ್ತೆ ಬದಿಗಳಲ್ಲಿ ಅಂತ್ಯ  ಸಂಸ್ಕಾರ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ.

ರಾಜ್ಯದ 31 ಜಿಲ್ಲೆಗಳ 229 ತಾಲೂಕುಗಳಲ್ಲಿ 28610 ಕಂದಾಯ ಗ್ರಾಮಗಳಿವೆ. ಅಲ್ಲದೇ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ವಸತಿ ಪ್ರದೇಶಗಳಿವೆ. ಸುಮಾರು 281 ನಗರ ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ಸುಮಾರು 7064 ಗ್ರಾಮಗಳಲ್ಲಿ ಅಧಿಕೃತ ಸ್ಮಶಾನಗಳಿಲ್ಲ. ಈ ಗ್ರಾಮಗಳಲ್ಲಿ ಸಾವಿಗೀಡಾದರೆ, ಊರಿಗೆ ಹೊಂದಿಕೊಂಡಿರುವ ಸರ್ಕಾರಿ  ಗೋಮಾಳ, ಅರಣ್ಯ ಪ್ರದೇಶ, ನದಿ, ಹಳ್ಳದ ದಂಡೆಯ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ.

ಇದನ್ನೂ ಓದಿ:ಮೂರನೇ ಅಲೆ ತಪ್ಪಿಸಿ : ಅಕ್ಟೋಬರ್‌ ನಲ್ಲಿ ಹಾವಳಿ ಸಾಧ್ಯತೆ, ಎಳೆಯರೇ ಗುರಿ?

ರಾಜ್ಯದಲ್ಲಿ ಸುಮಾರು 6,5 ಕೋಟಿ ಜನಸಂಖ್ಯೆ ಇದ್ದು, ಶೇ.84  ಹಿಂದುಗಳು, ಶೇ 12.92 ಮುಸ್ಲಿಮರು, ಶೇ 1.87 ಕ್ರಿಶ್ಚಿಯನ್ನರು, ಶೇ 1.21 ಇತರ ಧರ್ಮಿಯರಿದ್ದಾರೆ. ಜಮೀನು ಅಗತ್ಯ ಇರುವ ಕಡೆ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಧರ್ಮದ ಆಧಾರದಲ್ಲಿ ಪ್ರತ್ಯೇಕ ಸ್ಮಶಾನಗಳನ್ನು ಮಾಡಲಾಗಿದೆ. ಕೆಲವು ಕಡೆ ಜಾತಿಯ ಆಧಾರದಲ್ಲಿಯೂ ಸ್ಮಶಾನಗಳನ್ನು ಮಾಡಲಾಗಿದ್ದು, ಇದರಿಂದ ದಲಿತ ಸಮುದಾಯದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

Advertisement

ಕನಿಷ್ಠ 5 ಎಕರೆ ನೀಡಲು ಸೂಚನೆ: ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನಕ್ಕೆ ಕನಿಷ್ಠ 5 ಎಕರೆ ಜಮೀನು ಮೀಸಲಿಡುವಂತೆ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸರ್ಕಾರಿ ಜಮೀನು ಇದ್ದರೆ ಅದನ್ನೇ ಪರಿವರ್ತಿಸಿ ಸ್ಮಶಾನ ಮಾಡುವುದು, ಇಲ್ಲದಿದ್ದರೆ,  ಖಾಸಗಿಯವರಿಂದ ಜಮೀನು ಖರೀದಿಸಿ ಸ್ಮಶಾನ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ನಂತರ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್‌ ಪ್ರಸಾದ್‌ ಅವರ ಅವಧಿಯಲ್ಲಿಯೂ ವಿಶೇಷವಾಗಿ ದಲಿತ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಕಲ್ಪಿಸಲು ಅನುದಾನವನ್ನೂ ಮೀಸಲಿಟ್ಟು ಜಮೀನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಆದೇಶವೂ ಇದುವರೆಗೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ

ಅಂತ್ಯ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿ ರುವುದರಿಂದ ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಬೆಂಗಳೂರು, ಕಲಬುರ್ಗಿ, ಬೆಳಗಾವಿ ಸೇರಿದಂತೆ ಮಹಾ ನಗರ ಪ್ರದೇಶಗಳಲ್ಲಿ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಜಾಗ ಸಿಗದೆ ಜನರು ದಿನ ಗಟ್ಟಲೇ ಕಾಯುವ ಪ್ರಸಂಗ ಹೆಚ್ಚಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸ್ಥಿತಿಯನ್ನು ಅರಿತ ಕಂದಾಯ ಸಚಿವ ಆರ್‌. ಅಶೋಕ್‌ ಬೆಂಗಳೂರಿನ ಎಂಟು ಕಡೆ ತಾತ್ಕಾಲಿಕ ಸ್ಮಶಾನ ನಿರ್ಮಾಣ ಮಾಡುವ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಅಲ್ಲದೇ ಉಳಿದ ನಗರ ಪ್ರದೇಶಗಳಲ್ಲಿ ನಗರ ವ್ಯಾಪ್ತಿಯಿಂದ 2 ರಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಯಥಾಸ್ಥಿತಿ ಇದ್ದು, ಸಾಮಾನ್ಯ ಜನರು ಸಾವೀಗಿಡಾದರೆ, ಅಂತ್ಯ ಸಂಸ್ಕಾರ ಮಾಡುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ.

 

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next