Advertisement

301 ಗ್ರಾಮಗಳಲ್ಲಿಲ್ಲ ರುದ್ರಭೂಮಿ

04:24 PM Jan 03, 2020 | Suhan S |

ಕೊಪ್ಪಳ: ಜಿಲ್ಲೆಯ 624 ಗ್ರಾಮಗಳ ಪೈಕಿ 301 ಗ್ರಾಮಗಳಲ್ಲಿ ಈ ವರೆಗೂ ಅಂತ್ಯ ಸಂಸ್ಕಾರ ನೆರವೇರಿಸಲು ರುದ್ರಭೂಮಿಯೇ ಇಲ್ಲ. ಯಾರೇ ನಿಧನರಾದರೂ ಅವರ ಸಂಸ್ಕಾರ ಮಾಡೋದೇ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ದೂರದ ಸ್ಥಳಕ್ಕೆ ತೆರಳಿ ಗಾಂವಠಾಣ, ಗೋಮಾಳದ ಜಾಗದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸುವಂತಹ ಸ್ಥಿತಿ ಇಂದಿಗೂ ಇದೆ.

Advertisement

ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಅಂತ್ಯಸಂಸ್ಕಾರದ ಸಮಸ್ಯೆ ತುಂಬಾ ತಲೆನೋವಾಗುತ್ತಿದೆ. ಯಾರಾದರೂ ಊರಲ್ಲಿ ನಿಧನರಾದರೆ ಯಾಕಪ್ಪಾ ಸಾಯ್ತಾರೆ ಎನ್ನುವಂತಹ ಸ್ಥಿತಿ ಬಂದಿದೆ. ಇದು ಈಗಿನ ಸಮಸ್ಯೆಯಲ್ಲ, ದಶಕಗಳಿಂದಲೂ ಇದ್ದೇ ಇದೆ. ಮೊದಲು ಹಳ್ಳಿಗಳಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆಯಿತ್ತು. ಆಗ ಯಾರಾದರೂ ಮೃತಪಟ್ಟರೆ ತಮ್ಮ ತಮ್ಮ ಜಮೀನುಗಳಲ್ಲೇ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ಕಾಲಕ್ರಮೇಣ ರುದ್ರಭೂಮಿ ಬೇಕು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಜಿಲ್ಲಾಡಳಿತ ಪ್ರಕಾರ 624 ಗ್ರಾಮಗಳಿದ್ದು, ಇವುಗಳಲ್ಲಿ 323 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿ ಇದೆ. ಇನ್ನು 301 ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲ. ಈ ಪೈಕಿ 94 ಗ್ರಾಮಗಳಲ್ಲಿ ಜಮೀನು ಗುರುತಿಸಿದ್ದು ಮಂಜೂರಾತಿ ನೀಡುವುದು ಬಾಕಿಯಿದೆ.

ಇದಲ್ಲದೇ 05 ಗ್ರಾಮದಲ್ಲಿ ಖಾಸಗಿ ಜಮೀನು ಖರೀದಿಸಿದೆ. ಏಳು ತಾಲೂಕುಗಳ ಪೈಕಿ ಕೊಪ್ಪಳ ತಾಲೂಕಿನಲ್ಲಿ 65, ಕುಷ್ಟಗಿ ತಾಲೂಕಿನಲ್ಲಿ 107, ಯಲಬುರ್ಗಾ ತಾಲೂಕಿನಲ್ಲಿ 57 ಹಾಗೂ ಕನಕಗಿರಿ ತಾಲೂಕಿನಲ್ಲಿ 47 ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲ.

ಆಗ ಕೊಟ್ಟವರು ಈಗ ಕಿತ್ತುಕೊಂಡರು: ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಮಾನವೀಯತೆ ದೃಷ್ಟಿಯಿಂದ ಹೆಚ್ಚು ಭೂಮಿಯುಳ್ಳವರು ಅಂತ್ಯ ಸಂಸ್ಕಾರಕ್ಕಾಗಿ ತಮ್ಮ ಜಮೀನನ್ನು ಊರಿನ ಹಿತಕ್ಕಾಗಿ ದಾನ ಮಾಡಿದ್ದಾರೆ. ಅಲ್ಲಿ ಕೆಲವು ವರ್ಷಗಳಿಂದ ಅಂತ್ಯ ಸಂಸ್ಕಾರಗಳು ನಡೆದಿವೆ. ಆದರೆ ಹಿರಿಯರು ನಿಧನರಾದ ಬಳಿಕ ಅವರ ಮಕ್ಕಳು, ಮೊಮ್ಮಕ್ಕಳು ತಮ್ಮ ಹಿರಿಯರು ಕೊಟ್ಟ ಭೂಮಿಯನ್ನು ವಾಪಸ್‌ ಪಡೆದು ಅಲ್ಲಿ ಬಿತ್ತನೆ, ಉಳುಮೆ ಮಾಡಿಕೊಳ್ಳುತ್ತಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ತಕರಾರು ಮಾಡುತ್ತಿದ್ದಾರೆ. ಹಲವು ಹಳ್ಳಿಗಳಲ್ಲಿ ಇದೇ ಸಮಸ್ಯೆ ಎದುರಾಗುತ್ತಿದೆ. ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದಲ್ಲಿ ಇದೇ ಸಮಸ್ಯೆಯಾಗಿದೆ. ಮೊದಲು 1.05 ಎಕರೆ ಜಮೀನು ರುದ್ರಭೂಮಿಗಾಗಿ ಕೊಡಲಾಗಿತ್ತು. ಈಗ ಅವರ ಮಕ್ಕಳು ಭೂಮಿ ವಾಪಸ್‌ ಪಡೆದು ಅಲ್ಲಿ ಬಿತ್ತನೆ ಕಾರ್ಯ ನಡೆಸಿದ್ದಾರೆ. ಇದು ತಹಶೀಲ್ದಾರ್‌, ಜಿಲ್ಲಾಡಳಿತದ ಗಮನಕ್ಕೂ ಬಂದಿದ್ದು, ಸ್ವತಃ ತಹಶೀಲ್ದಾರ್‌ ಅವರೇ ಸ್ಥಳಕ್ಕೆ ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ ಪ್ರಸಂಗ ನಡೆದರೂ ಅದು ಇನ್ನೂ ಇತ್ಯರ್ಥವಾಗಿಲ್ಲ.

ಹಳ್ಳ-ಹೊಲ-ರಸ್ತೆ ಬದಿಗಳಲ್ಲೇ ಸಂಸ್ಕಾರ: ಕೆಲವೆಡೆ ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದಿದ್ದರೂ ಸರ್ಕಾರಿ ಜಮೀನು, ಗಾವಠಾಣ ಇರುವ ಸ್ಥಳದಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಕೆಲವೆಡೆ ರಸ್ತೆ ಬದಿಯಲ್ಲಿಯೇ ತಗ್ಗು ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ಮಾಡುವಂತಹ ಸ್ಥಿತಿಯಿದೆ. ಹ್ಯಾಟಿ ಗ್ರಾಮದಲ್ಲಿ ರಸ್ತೆ ಬದಿ ಅಂತ್ಯ ಸಂಸ್ಕಾರ ನಡೆದರೆ, ಚುಕ್ಕನಕಲ್‌ ಗ್ರಾಮದಲ್ಲಿ ಇಕ್ಕಟ್ಟಾದ ಹಳ್ಳದ ಮಧ್ಯೆ ಅಂತ್ಯಸಂಸ್ಕಾರ ನಡೆಯುತ್ತಿವೆ. ಇನ್ನೂ ಹಿರೇ ಸಿಂದೋಗಿಯಲ್ಲೂ ಹಳ್ಳದಲ್ಲೇ ಅಂತ್ಯಕ್ರಿಯೆ ನಡೆಯುತ್ತಿವೆ. ಕೆಲವೆಡೆ ಅಂತ್ಯ ಸಂಸ್ಕಾರಕ್ಕೆ ಜಮೀನು ಇಲ್ಲದ ಕಾರಣ ಗ್ರಾಮಸ್ಥರು ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಪ್ರಸಂಗಗಳೂ ನಡೆದಿವೆ. ಜಿಲ್ಲಾಡಳಿತ ಇಂತಹ ಜಟಿಲ ಸಮಸ್ಯೆಗಳಿಗೆ ಕೂಡಲೇ ಇತ್ಯರ್ಥ ಮಾಡಬೇಕಿದೆ. ಅಂತ್ಯಸಂಸ್ಕಾರಕ್ಕೂ ಜನ ಪರದಾಡುವ ಸ್ಥಿತಿಯನ್ನರಿತು ಗ್ರಾಮದ ಅಕ್ಕಪಕ್ಕದ ಖಾಸಗಿ ಜಮೀನು ಖರೀದಿಸಿಯಾದರೂ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ.

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next