Advertisement

102 ಹಳ್ಳಿಗಳಲ್ಲಿ ಇಲ್ಲ ರುದ್ರಭೂಮಿ..!

10:42 AM Jan 05, 2019 | |

ಗದಗ: ಗದಗ ಪ್ರತ್ಯೇಕ ಜಿಲ್ಲೆಯಾಗಿ ರೂಪಗೊಂಡು 21 ವರ್ಷ ಕಳೆದರೂ ಜಿಲ್ಲೆಯ 102 ಹಳ್ಳಿಗಳಲ್ಲಿ ರುದ್ರಭೂಮಿ ಇಲ್ಲ. ಹೌದು. ಇತ್ತೀಚಿನ ದಿನಗಳಲ್ಲಿ ಬರಡು ಭೂಮಿಗೂ ಬಂಗಾರದ ಬೆಲೆ ಬರುತ್ತಿರುವುದರಿಂದ ಇಷ್ಟು ದಿನ ಶವ ಸಂಸ್ಕಾರಕ್ಕೆಂದು ನೀಡಿದ್ದ ಜಮೀನುಗಳನ್ನು ಮರಳಿ ಪಡೆಯುತ್ತಿರುವುದರಿಂದ ರುದ್ರಭೂಮಿ ಇಲ್ಲದ ಊರುಗಳಲ್ಲಿ ಯಾರಾದರೂ ಸತ್ತರೆ ಅಂತ್ಯಸಂಸ್ಕಾರದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

Advertisement

ಸ್ವಂತ ಜಮೀನುಗಳಿದ್ದವರು ತಮ್ಮ ಹೊಲಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದರೆ, ಜಮೀನು ಇಲ್ಲದವರು ಹಾಗೂ ಮತ್ತಿತರರು ಸಂಪ್ರದಾಯದಂತೆ ಗ್ರಾಮದ ಹಿರೇಮಠ, ಪುರೋಜಿತ, ವಾಲಿಕಾರರು ಸೇರಿದಂತೆ ಊರಿನ ಮಠಗಳಿಗೆ ಸಂಬಂಧಿಸಿದ ಜಮೀನುಗಳಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು.

ಅದರೊಂದಿಗೆ ಕೆಲ ಸಹೃದಯಿಗಳು ಗ್ರಾಮಸ್ಥರ ಅನುಕೂಲಕ್ಕಾಗಿ ಜಮೀನಿನ ಕೆಲ ಭಾಗವನ್ನು ಶವಸಂಸ್ಕಾರಕ್ಕೆ ಬಿಟ್ಟು ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ದವಸ, ಧಾನ್ಯಗಳನ್ನು ಶಕ್ತ್ಯಾನುಸಾರ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಕೃಷಿ ಮಾಡಲಿಕ್ಕಾಗಿಯೇ ಭೂಮಿ ಸಾಕಾಗುತ್ತಿಲ್ಲ ಎಂಬುದು ಸೇರಿದಂತೆ ನಾನಾ ಕಾರಣಗಳಿಂದ ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರಕ್ಕೆ ಮಾಲೀಕರು ವಿರೋಧಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಫಲಿಸದ ದಶಕಗಳ ಪ್ರಯತ್ನ: ಪ್ರತಿ ಗ್ರಾಮಕ್ಕೊಂದು ಸ್ಮಶಾನ ಕಲ್ಪಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ದಶಕಗಳಿಂದ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಖಾಸಗಿ ವ್ಯಕ್ತಿಗಳಿಂದಲೇ ಜಮೀನು ಪಡೆಯಬೇಕೆಂಬ ಸರಕಾರದ ನಿಯಮದಿಂದ ಜಿಲ್ಲಾಡಳಿತ, ಖಾಸಗಿ ಜಮೀನುಗಳ ಹುಡುಕುವಲ್ಲಿ ಬೇಸತ್ತಿದೆ. ಸಾಮಾನ್ಯವಾಗಿ ಆಸ್ತಿ ಮಾರಾಟ- ಖರೀದಿ ವೇಳೆ ನೈಜ ಬೆಲೆಗಿಂತ ಕಡಿಮೆ ದರದಲ್ಲಿ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಹೀಗಾಗಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುತ್ತೇವೆ ಎಂದರೂ ರೈತರು ಜಮೀನು ಬಿಟ್ಟು ಕೊಡುವುದಿಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

ಧೂಳು ತಿನ್ನುತ್ತಿದೆ ಪ್ರಸ್ತಾವನೆ: ಜಿಲ್ಲೆಯ ಒಟ್ಟು 327 ಗ್ರಾಮಗಳ ಪೈಕಿ ಗದಗ ತಾಲೂಕಿನಲ್ಲಿ 10, ಮುಂಡರಗಿಯಲ್ಲಿ 13, ನರಗುಂದದಲ್ಲಿ 15, ರೋಣದಲ್ಲಿ 33, ಶಿರಹಟ್ಟಿಯಲ್ಲಿ 31 ಗ್ರಾಮಗಳಲ್ಲಿ ರುದ್ರಭೂಮಿಯೇ ಇಲ್ಲ. ನರಗುಂದ ಹೊರತುಪಡಿಸಿ ಇನ್ನುಳಿದ ನಾಲ್ಕು ತಾಲೂಕುಗಳಲ್ಲಿ ತಲಾ ಒಂದು ಗ್ರಾಮದಲ್ಲಿ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. 31 ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಗೆ ಸುಮಾರು 2 ಕೋಟಿ ರೂ. ಅನುದಾನ ಕೋರಿ ಜಿಲ್ಲಾಡಳಿತ 2017ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಸರಕಾರದಿಂದ ಪ್ರತಿಕ್ರಿಯೆಯಿಲ್ಲ.

Advertisement

ಒಂದೆಡೆ ರುದ್ರಭೂಮಿ ಒದಗಿಸಲು ಸರಕಾರ ಹಣ ಮಂಜೂರು ಮಾಡುತ್ತಿಲ್ಲ, ಮತ್ತೂಂದೆಡೆ ರುದ್ರಭೂಮಿ ಇಲ್ಲದ್ದರಿಂದ ಜನರು ನಡುರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆಗಿಳಿಯುತ್ತಿರುವುದರಿಂದ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ.

ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸುವಂತೆ ದಶಕಗಳಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದೇ ರೀತಿ ಆಡಳಿತ ನಿರ್ಲಕ್ಷ್ಯ ಮುಂದುವರಿದರೆ, ಮುಂದಿನ ದಿನಗಳಲ್ಲಿ ತಹಶೀಲ್ದಾರ್‌, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶವ ಸಂಸ್ಕಾರ ಮಾಡುತ್ತೇವೆ.
•ಕುಬೇರಪ್ಪ, ಹಾತಲಗೇರಿ ನಿವಾಸಿ.

ಒಂದೂವರೆ ವರ್ಷದ ಹಿಂದೆಯೇ 31 ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಲು ಉದ್ದೇಶಿಸಿ, ಅದಕ್ಕೆ ಸಂಬಂಧಿಸಿ ಸರಕಾರಕ್ಕೆ ಸುಮಾರು 2 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. •ಶಿವಾನಂದ ಕರಾಳೆ, ಅಪರ ಜಿಲ್ಲಾಧಿಕಾರಿ.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next