Advertisement

ಜಾತಿ ವೈಭವ ಬೇಡ; ಮಾನವೀಯ ಮೌಲ್ಯ ವಿಜೃಂಭಿಸಲಿ: ಮಾದಾರ ಚೆನ್ನಯ್ಯ ಶ್ರೀ

09:12 AM Nov 27, 2017 | Team Udayavani |

ಉಡುಪಿ: ಸಮಾಜದಲ್ಲಿ ಕಸುಬು ಅವಲಂಬಿತ ಜಾತಿ ವೈಭವೀಕರಿಸ‌ುವ ಬದಲು ಮಾನವೀಯ ಮೌಲ್ಯಗಳ ಧರ್ಮ ವಿಜೃಂಭಿಸಲಿ. ಆಗ ಅಸ್ಪೃಶ್ಯಮುಕ್ತ ಭಾರತ ನಿರ್ಮಾಣದ ದಿನಗಳು ದೂರವಿಲ್ಲ. ಮತಾಂತರವಾದವರ ಘರ್‌ ವಾಪ್ಸಿಗೆ ಆದ್ಯತೆ ನೀಡುವ ಬದಲು ಮತಾಂತರವೇ ಆಗದಂತೆ ಅನ್ಯಧರ್ಮದೆಡೆಗಿನ ಆಕರ್ಷಣೆ ತಪ್ಪಿಸುವ ಕೆಲಸವಾಗಲಿ ಎಂದು ಚಿತ್ರದುರ್ಗದ ಬಸವಮೂರ್ತಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ನುಡಿದರು.

Advertisement

ರವಿವಾರ ಧರ್ಮ ಸಂಸದ್‌ ಅಂಗವಾಗಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಆಗ ಬಸವಣ್ಣ , ಈಗ ಪೇಜಾವರ ಇತರರಿಗೆ ಬೋಧಿಸುವ ಮುನ್ನ ಸ್ವಾಮೀಜಿಗಳ ನಡುವಿನ ಅಸಮಾನತೆ ತೊಲಗಬೇಕು. ಅಸ್ಪೃಶ್ಯತೆ ನಿವಾ ರಣೆಗೆ ಮಠಪೀಠಗಳು ಒಂದಾಗಬೇಕು. ಇದರ ಹಿಂದೆ ಬರುವ ಟೀಕೆಗೆ ಸೊರಗ ದಂತೆ ಅಷ್ಟ ಮಠಾ ಧೀಶರು ಪೇಜಾವರ ಶ್ರೀಗಳ ಬೆನ್ನೆಲುಬಾಗಿ ನಿಲ್ಲಬೇಕು. ಆಗ ಮಠಾಧೀಶರು ಭಕ್ತರ ಅಸಮಾನತೆ ತೊಲಗಿಸಲು ಮುಂದಾಗ ಬಹುದು. ಅಂದು ಬಸವಣ್ಣ, ಇಂದು ಪೇಜಾವರ ಶ್ರೀಗಳು ಅಸಮಾನತೆ ವಿರುದ್ಧ ಕ್ರಾಂತಿ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳು 1969ರಲ್ಲಿ ದಲಿತರ ಕೇರಿಗೆ ಹೋದರೆ ನಾನು 2010ರಲ್ಲಿ ಬ್ರಾಹ್ಮಣರ ಕೇರಿಗೆ ಹೋದೆ. ಮುಂದಿನ ಧರ್ಮ ಸಂಸದ್‌ನಲ್ಲಿ ಈ ಜಾತಿವಾರು ಕೇರಿಗಳು ಇರಬಾರದು ಎಂದರು.

ಗೋ ಮಹತ್ವ  ತಿಳಿಸಿರಿ
ಗೋಮಾತೆಯ ರಕ್ಷಣೆ ಇಂದಿನ ಅಗತ್ಯಗಳ ಪೈಕಿ ಒಂದು. ಗೋವಿನ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಕೆಲಸ ಯುವಕರಿಂದಾಗಬೇಕು. ಬದಲಾವಣೆ ಎಲ್ಲ ಕಾಲದಲ್ಲೂ ಆಗುವುದಿಲ್ಲ. ಇಲ್ಲಿ ಸೇರಿದ ಜನರನ್ನು ನೋಡಿದಾಗ ಕಾಲ ಕೂಡಿ ಬಂದಾಗ ಬದಲಾವಣೆ ಆಗುತ್ತದೆ ಎನ್ನುವುದು ತಿಳಿಯುತ್ತದೆ ಎಂದು ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ಸಾಮರಸ್ಯ ಮುಖ್ಯ
ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡ ಕಾರಣ ನನ್ನ ವಿರುದ್ಧ ಟೀಕೆಗಳು ಬರಬಹುದು. ಪೀಠತ್ಯಾಗಕ್ಕೆ ಒತ್ತಾಯ ಬರಬಹುದು. ಆದರೆ ನನಗೆ ಭಾರತದ ಸಾಮರಸ್ಯ ಮುಖ್ಯ ವಿನಾ ಮಠಪೀಠ ಅಲ್ಲ. ಧರ್ಮ ಒಬ್ಬ ವ್ಯಕ್ತಿಯಿಂದ ಬಂದದ್ದು ಅಲ್ಲ. ಒಬ್ಬರ ಮೇಲೆ ಮಾನವೀಯ ಮೌಲ್ಯ ಹೇರುವುದೇ ಧರ್ಮ ಎಂದರು.

ಮನೆ ಮನೆಗಳಲ್ಲಿ  ಸಾಮರಸ್ಯ
ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯ ದರ್ಶಿ ಗೋಪಾಲ್‌ ಧರ್ಮ ಸಂಸದ್‌ನ ನಿರ್ಣಯಗಳನ್ನು ತಿಳಿಸಿ, ದೇವಸ್ಥಾನ ಗಳಲ್ಲಿ ಎಲ್ಲ ರಿಗೂ ಪ್ರವೇಶ ದೊರೆಯು ವಂತಾಗಬೇಕು. ಮನೆ ಮನೆ ಗಳಲ್ಲಿ ಸಾಮರಸ್ಯ ಎಂಬ ಸಂಕಲ್ಪ ಮಾಡ ಲಾಗಿದೆ.  ಪ್ರತೀ ಹಿಂದುವೂ ಗೋಮಾಂಸ ತಿನ್ನುವು ದಿಲ್ಲ ಎಂದು ಸಂಕಲ್ಪ ಮಾಡಬೇಕು. ಗೋಹತ್ಯೆ ಮಾಡು ವವರನ್ನು ಸೂಕ್ತ ರೀತಿಯಲ್ಲಿ ಎದುರಿಸಬೇಕು ಎಂದು ತಿಳಿಸಿದರು.

Advertisement

ಸಂತರಲ್ಲಿ  ಸಮಾನತೆ ವಿಹಿಂಪ ಸಾಧನೆ
ಧರ್ಮ ಸಂಸದ್‌ ಕಾರ್ಯಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮೊದಲ ಧರ್ಮ ಸಂಸದ್‌ ನಡೆದಾಗ ಸಮಾಜದಲ್ಲಿ ಸಾಮರಸ್ಯದ ಕೊರತೆ ಇತ್ತು. ವಿಹಿಂಪದ ಅನೇಕ ಕಾರ್ಯ ಗಳಿಂದಾಗಿ ಇಂದು ಕಡಿಮೆ ಯಾಗಿದ್ದು ಸಂತರಲ್ಲಿ ಸಮಾನತೆ ತರುವ ಮಹತ್ತರ ಕಾರ್ಯ ವಾಗಿದೆ. ಈ ಮೂಲಕ ಸಮಾಜದ ಇತರರಿಗೆ ಆದರ್ಶವಾಗುವ ಯತ್ನ ನಡೆದಿದೆ ಎಂದರು.

ಬಡತನ ನಾಶವಾಗಲಿ
ನಾವು ಮತಾಂತರ ಮಾಡುವುದಿಲ್ಲ. ಮನ ಒಲಿಸುತ್ತೇವೆ. ಗೋಮಾಂಸ ಭಕ್ಷಣೆ ತ್ಯಜಿಸುವ ಮೂಲಕ ಗೋಸಂಪತ್ತು ರಕ್ಷಿಸಬೇಕು. ಹಿಂದೂ ಧರ್ಮದ ಭಾವನೆಗಳಿಗೆ ರಕ್ಷಣೆ ಕೊಡುವ ವಿಹಿಂಪವನ್ನು ಭದ್ರ ಗೊಳಿ ಸೋಣ. ರಾಮ ಮಂದಿರ ಕುರಿತು ಸಕಾರಾತ್ಮಕ ಚಿಂತನೆ ಮಾಡೋಣ ಎಂದರು.

ಪೇಜಾವರ ಉಭಯ ಶ್ರೀಗಳು, ಪುತ್ತಿಗೆ, ಸುಬ್ರಹ್ಮಣ್ಯ, ಆನೆಗೊಂದಿ, ಕೈವಲ್ಯ, ಒಡಿಯೂರು, ಮಾಣಿಲ, ಬಾರಕೂರು ಸಂಸ್ಥಾನ, ವಜ್ರದೇಹಿ ಮಠದ ಸ್ವಾಮೀಜಿ ಹಾಗೂ ಉತ್ತರ ಕರ್ನಾಟಕ, ಉತ್ತರ ಭಾರತದ ಸಂತರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಚಂಪತ್‌ರಾಯ್‌ ಪ್ರಸ್ತಾವನೆ ಗೈದರು. ವಿಹಿಂಪ  ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಡಾ| ಎಸ್‌.ಆರ್‌. ರಾಮನ ಗೌಡರ್‌ ಧಾರ ವಾಡ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ ಹೊಸಪೇಟೆ, ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮಾನೆ, ಉತ್ತರ ಪ್ರಾಂತ ಪ್ರಮುಖ್‌ ಗೋವರ್ಧನ್‌ ರಾವ್‌, ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ಮುಖಂಡರಾದ ಗಣೇಶ್‌ ರಾವ್‌, ಆನಂದ ಕುಂದರ್‌, ಜಗದೀಶ ಶೇಣವ, ಮನೋಹರ ಶೆಟ್ಟಿ, ಭಾಸ್ಕರ ಧರ್ಮಸ್ಥಳ ಮೊದಲಾದವರಿದ್ದರು.

ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಸ್ವಾಗತಿಸಿ ಜಿಲ್ಲಾಧ್ಯಕ್ಷ ವಿಲಾಸ್‌ ನಾಯಕ್‌ ವಂದಿಸಿದರು.

ಸಂಸ್ಕೃತಿ ರಫ್ತು, ಭೋಗ ಆಮದು
ನಮ್ಮ ಅತ್ಯುತ್ಕೃಷ್ಟ ಸಂಸ್ಕೃತಿ ವಿದೇಶಗಳಿಗೆ ರಫ್ತಾಗುತ್ತಿದೆ. ಅವರು ಅನುಕರಿಸುತ್ತಿದ್ದಾರೆ. ನಾವು ವಿದೇಶ‌ದ ಭೋಗ ಜೀವನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.  ಪ್ರಧಾನಿ ಮೋದಿಯಿಂದಾಗಿ ದೇಸೀ ಯೋಗ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮೂಲಕ ವಿಶ್ವಮಾನ್ಯತೆ ಪಡೆಯುವ ಯೋಗ ಪ್ರಾಪ್ತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ವಿದೇಶದ ಭೋಗ ತಡೆಯೋಣ, ನಮ್ಮ ಸಂಸ್ಕೃತಿಯನ್ನು ಬೆಳೆಸೋಣ.     
ಡಾ| ಡಿ. ವೀರೇಂದ್ರ ಹೆಗ್ಗಡೆ

ಲವ್‌ ಜೆಹಾದ್‌ಗೆ ಪ್ರತಿ ಲವ್‌ ಜೆಹಾದ್‌
ಭಾರತದಲ್ಲಿ ಸ್ವಾತಂತ್ರ್ಯ ಬಂದಾಗ ಶೇ. 93 ಹಿಂದೂಗಳಿದ್ದರು. ಈಗ ಶೇ. 80 ಇದ್ದಾರೆ. ಪಾಕಿಸ್ಥಾನದಲ್ಲಿ ಶೇ. 11 ಇದ್ದುದು ಈಗ ಶೇ. 2 ಆಗಿದೆ.  ಬಾಂಗ್ಲಾದಲ್ಲಿ ಶೇ. 29 ಇದ್ದುದು ಈಗ ಶೇ. 8 ಆಗಿದೆ. ಮತಾಂತರ ಹಾಗೂ ಲವ್‌ ಜೆಹಾದ್‌ ಮೂಲಕ ವ್ಯವಸ್ಥಿತವಾಗಿ ಹಿಂದೂ ಜನಸಂಖ್ಯೆ ಕ್ಷೀಣಿಸುತ್ತಿದೆ. ಅನ್ಯಮತೀಯರು ಲವ್‌ ಜೆಹಾದ್‌ ನಿಲ್ಲಿಸದಿದ್ದರೆ ಬಜರಂಗ ದಳದ ಯುವಕರು ಪ್ರತಿ ಲವ್‌ ಜೆಹಾದ್‌ ನಡೆಸಲಿದ್ದಾರೆ.
 – ಗೋಪಾಲ್‌, ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ

ಸಮಾಜೋತ್ಸವದಲ್ಲಿ. . . . .
    ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ, ವಿ.ಪ. ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಇತರ ಜನಪ್ರತಿನಿಧಿಗಳು ಸಭಾಸದರ ಸಾಲಿನಲ್ಲಿದ್ದರು.

    ಮೋದಿಯನ್ನು ಹೋಲುವ ಹಿರಿಯಡ್ಕ ಸದಾನಂದ ನಾಯಕ್‌ ಹಾಗೂ ಗಾಂಧಿ ಪಾತ್ರಧಾರಿ ಗೋವದ ಆಗಸ್ಟಿನ್‌ ಆಕರ್ಷಣೆಯಾಗಿದ್ದರು.

    150 ಅಡಿ ಉದ್ದ , 48 ಅಡಿ ಅಗಲದ ವೇದಿಕೆಗೆ ಅಳವಡಿಸಿದ ಬೃಹತ್‌ ಪರದೆಯಲ್ಲಿ ಧರ್ಮ ಸಂಸ್ಥಾಪನಾರ್ಥಾಯ ಎಂದು ದೊಡ್ಡದಾಗಿ ಮುದ್ರಿಸಿ ಧರ್ಮವೇ ಸರ್ವಸ್ವ ಧರ್ಮ ರಕ್ಷಣೆಯೇ ಕರ್ತವ್ಯ ಎಂದು ಬರೆಯ ಲಾಗಿತ್ತು. ಕೋದಂಡಧಾರಿ ರಾಮನ ಚಿತ್ರ ಹಾಗೂ ಅರ್ಜುನ ನಿಗೆ ಬೋಧನೆ ಮಾಡುತ್ತಿರುವ ಕೊಳಲು ಹಿಡಿದ ಕೃಷ್ಣನ ಚಿತ್ರವಿತ್ತು. ವಿಶ್ವ ಹಿಂದೂ ಪರಿಷತ್‌ನ ಮರದ ಲಾಂಛನವಿರುವ ಧ್ವಜ ಹಿಡಿದ ಕೈಯ ಚಿತ್ರವಿತ್ತು. ವೇದಿಕೆಯ ಒಂದು ಪಾರ್ಶ್ವದಲ್ಲಿ ಭಾರತಮಾತೆಯ ಪ್ರತಿಮೆ ಇಡಲಾಗಿತ್ತು.

    ವೇದಿಕೆಯ ಎಡಭಾಗದಲ್ಲಿ ಧರ್ಮಾಧ್ಯಕ್ಷರಿಗೆ ಪ್ರತ್ಯೇಕ ಆಸನ ಇತ್ತು. ಉ.ಭಾರತದ ನೂರಾರು ಸಂತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ಧರ್ಮ ರಕ್ಷಾ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು.

    ಪೇಜಾವರ ಕಿರಿಯ ಶ್ರೀಗಳು ಸಮಾಜೋತ್ಸವಕ್ಕೆ ಕೂಡ ಕುದುರೆ ಮೂಲಕವೇ ಆಗಮಿಸಿದರು.

    ಪುತ್ತೂರಿನ ಜಗದೀಶ್‌ ಆಚಾರ್ಯ ಹಾಗೂ ಕಲಾವತಿ ಬಳಗದವರು ಹಾಡುಗಳ ಮೂಲಕ ರಂಜಿಸಿದರು.

    ಅಪರಾಹ್ನ 2.30ರಿಂದಲೇ ಜನ ಮೈದಾನದಲ್ಲಿ ಸೇರತೊಡಗಿದ್ದು ಕಾರ್ಯಕ್ರಮ 4.20ಕ್ಕೆ  ಆರಂಭವಾಯಿತು.

ಉಡುಪಿ: ಧರ್ಮಸಂಸದ್‌ನ ಅಂಗವಾಗಿ ಎಂಜಿಎಂ ಮೈದಾನದಲ್ಲಿ  ರವಿವಾರ ನಡೆದ ಬೃಹತ್‌ ಹಿಂದೂ ಸಮಾಜೋತ್ಸವದಲ್ಲಿ  ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ| ಪ್ರವೀಣ್‌ ತೊಗಾಡಿಯಾ ಅವರು ದಿಕ್ಸೂಚಿ ಭಾಷಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next