Advertisement

ಇಸಿಜಿ ಯಂತ್ರ ಕಾಣೆಯಾದ್ರೂ ಕೇಸೂ ಇಲ್ಲ

05:58 PM Apr 03, 2022 | Team Udayavani |

ಸಿಂಧನೂರು: ಲಕ್ಷಾಂತರ ರೂ. ಬೆಲೆ ಬಾಳುವ ಇಸಿಜಿ ಯಂತ್ರ ಕಾಣೆಯಾಗಿದೆ. ಯಾವುದೇ ದೂರು ಇಲ್ಲ; ತನಿಖೆಯೂ ಆಗಿಲ್ಲ. ಇನ್ನು 1.5 ಕೋಟಿ ರೂ.ಗೂ ಹೆಚ್ಚಿನ ವೈದ್ಯಕೀಯ ಉಪಕರಣಗಳ ಭದ್ರತೆ ಕುರಿತು ಇದೀಗ ದೊಡ್ಡ ಸಂಶಯ ಮೂಡಲಾರಂಭಿಸಿದೆ.

Advertisement

ವೈದ್ಯರೇ ಇಲ್ಲವೆಂದು ಗೋಳಾಡುತ್ತಿದ್ದ ಇಲ್ಲಿನ 100 ಹಾಸಿಗೆ ಸಾರ್ವಜನಿಕ ಆಸ್ಪತ್ರೆಗೆ ಡಜನ್‌ ಲೆಕ್ಕದಲ್ಲಿ ವೈದ್ಯರನ್ನು ಸರಕಾರ ಕೊಟ್ಟರೂ ಆಡಳಿತ ಹಳಿ ತಪ್ಪಿದೆ. ಸರಕಾರದಿಂದ ಲಭಿಸಿರುವ ಬೆಲೆ ಬಾಳುವ ವೈದ್ಯಕೀಯ ಉಪಕರಣಗಳನ್ನು ಖಾಸಗಿಯಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಆರೋಪ ಆಡಳಿತ ಪಕ್ಷ ಬಿಜೆಪಿಯವರಿಂದಲೇ ಕೇಳಿಬಂದಿದೆ. ಈ ನಡುವೆ ಲಕ್ಷಾಂತರ ರೂ. ಅವ್ಯವಹಾರ, ಸಿಬ್ಬಂದಿಯ ಹೊಂದಾಣಿಕೆ ಸೂತ್ರ ಬಡವರಿಗೆ ಶಾಪವಾಗಿ ಪರಿಣಮಿಸಿದೆ.

ವೈದ್ಯರೂ ಸಿಗುವುದೇ ಇಲ್ಲ: ರಾಜಕೀಯ ಪಕ್ಷದ ನಾಯಕರು ಇಲ್ಲವೇ ಉನ್ನತಮಟ್ಟದ ಅಧಿಕಾರಿಗಳ ಸೂಚನೆ ಬಂದಾಗಲಷ್ಟೇ ಇರುವ 11ಕ್ಕೂ ಹೆಚ್ಚು ವೈದ್ಯರ ಪೈಕಿ ಒಬ್ಬರು ಬಂದು ಪರಿಸ್ಥಿತಿ ಸರಿದೂಗಿಸುತ್ತಿದ್ದಾರೆ. ಸಾಮಾನ್ಯರು ಆಸ್ಪತ್ರೆಗೆ ಹೋದಾಗ ಅವರಿಗೆ ಕವಡೆ ಕಿಮ್ಮತ್ತಿಲ್ಲದಾಗಿದ್ದು, ಇತ್ತೀಚೆಗೆ ತಡರಾತ್ರಿ ತಹಶೀಲ್ದಾರ್‌ ಮಂಜುನಾಥ ಭೋಗಾವತಿ ಅವರೇ ಆಸ್ಪತ್ರೆಗೆ ಹೋಗಿ, ನಿದ್ರೆಯಲ್ಲಿದ್ದವರನ್ನು ಎಬ್ಬಿಸಿದ ಘಟನೆ ಆಸ್ಪತ್ರೆ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

ಯಂತ್ರ ಕಾಣೆಯಾದರೂ ಮೌನ: ಎಲ್ಲ ವೈದ್ಯರು ಇಸಿಜಿ ಪರೀಕ್ಷೆಯನ್ನು ಬರೆದುಕೊಡುವುದು ಸಾಮಾನ್ಯ. ಇದಕ್ಕಾಗಿ ಬಡವರು ಹೊರಗಡೆ ಹೋಗಿ ಪರೀಕ್ಷೆ ಮಾಡಿಸಬೇಕಿದೆ. ಇಲ್ಲಿ ಸರಕಾರ ಕೊಟ್ಟಿರುವ ಎರಡು ಇಸಿಜಿ ಯಂತ್ರಗಳಿವೆ. 1.50 ಲಕ್ಷ ರೂ. ಮೌಲ್ಯದ ಯಂತ್ರವೊಂದು ಕಾಣೆಯಾಗಿದೆ. ಎಲ್ಲಿಗೆ ಹೋಯಿತು ಎಂಬುದಕ್ಕೆ ಸಿಬ್ಬಂದಿ ಬಳಿ ಉತ್ತರವಿಲ್ಲ. ಇಸಿಜಿ ಯಂತ್ರವಿಲ್ಲವೆಂಬುದಕ್ಕೆ ದಾಖಲೆ ದೊರೆಯುತ್ತಿದೆ.

ಕೊಠಡಿಯ ಅಭಾವ: ಸರಕಾರದಿಂದ ಪೂರೈಕೆಯಾಗಿರುವ ವೈದ್ಯಕೀಯ ಉಪಕರಣಗಳನ್ನು ಮೊದಲು ರಕ್ಷಣೆ ಮಾಡಲಾಗುತ್ತಿದೆ. ಅಲ್ಲಿರುವ ಕೊಠಡಿಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದು, ಇರುವ 11ಕ್ಕೂ ಹೆಚ್ಚು ವೈದ್ಯರಿಗೆ ಪ್ರತ್ಯೇಕ ಕೊಠಡಿ ಕೊಟ್ಟಿಲ್ಲ. ವೈದ್ಯರ ಫಲಕವನ್ನು ಹಾಕಿ ಅವರಿಗೆ ಸಾರ್ವಜನಿಕ ಸೇವೆ ಕಲ್ಪಿಸಲು ಅವಕಾಶ ನೀಡಿಲ್ಲ. ಸ್ವತಃ ಶಾಸಕ ವೆಂಕಟರಾವ್‌ ನಾಡಗೌಡರೇ ಹಲವು ಬಾರಿ ಭೇಟಿ ನೀಡಿ ಎಚ್ಚರಿಸಿದರೂ ಪರಿಸ್ಥಿತಿ ಸುಧಾರಿಸಿಲ್ಲ. ವೈದ್ಯರ ಹಾಜರಾತಿಯೇ ಬೇರೆ; ಉಳಿದ ಸಿಬ್ಬಂದಿಯ ಹಾಜರಾತಿ ಪುಸ್ತಕವೇ ಬೇರೆ ಎಂಬ ಪದ್ಧತಿ ಇದೆ.

Advertisement

ಎಲ್ಲ ವೈದ್ಯರಿರುವ ಏಕೈಕ ಆಸ್ಪತ್ರೆಗೆ ರೋಗ

ಮೂರ್‍ನಾಲ್ಕು ವೈದ್ಯರಿದ್ದರೆ, ಅಲ್ಲಿ ದಿನಕ್ಕೆ 1500 ಜನರ ತಪಾಸಣೆ ನಡೆಸಿ, 50 ಹೆಚ್ಚು ಒಳರೋಗಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಆದರೆ, ಸರಕಾರಿ ಆಸ್ಪತ್ರೆಯಲ್ಲಿ ಬೇಕಾದಷ್ಟು ವೈದ್ಯರಿದ್ದಾರೆ. ಪಿಜಿಸಿಯನ್‌ ಡಾ| ಹನುಮಂತರೆಡ್ಡಿ, ನೇತ್ರ ತಜ್ಞ ಸುರೇಶಗೌಡ, ಸ್ತ್ರೀರೋಗ ತಜ್ಞ ಡಾ| ನಾಗರಾಜ್‌ ಕಾಟ್ವಾ, ಅರವಳಿಕೆ ತಜ್ಞೆ ಡಾ| ಕೋನಿಕಾ, ಶಸ್ತ್ರಚಿಕಿತ್ಸ ಡಾ| ಮಂಜುನಾಥ, ಕಿವಿ, ಮೂಗು ಗಂಟಲು ತಜ್ಞ ಡಾ| ರವಿ ಮಾಲೇಕರ್‌, ಚರ್ಮರೋಗ ತಜ್ಞ ಡಾ| ಗಂಗಾಧರ, ಮಕ್ಕಳ ತಜ್ಞ ಡಾ| ವಿನಯಕುಮಾರ್‌, ಕೀಲು, ಮೂಳೆ ರೋಗ ತಜ್ಞ ಡಾ| ವಿಜಯ, ದಂತ ವೈದ್ಯೆ ಡಾ|ನಾಗವೇಣಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ| ಪುಷ್ಟಲತಾ ಸೇರಿದಂತೆ ಪರಿಣಿತ ವೈದ್ಯರೇ ಇಲ್ಲಿದ್ದಾರೆ. ಆದರೂ, ಸೇವೆ ಮರೀಚಿಕೆಯಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ಒಂದು ಇಜಿಸಿ ಯಂತ್ರ ಕಾಣೆಯಾಗಿದೆ. ಯಾರು ಒಯ್ದಿದ್ದಾರೋ ಗೊತ್ತಿಲ್ಲ. ಚಿಕಿತ್ಸೆಗೆ ಬೇಕಾದ ಎಲ್ಲ ವೈದ್ಯಕೀಯ ಉಪಕರಣ ಲಭ್ಯವಿದ್ದು, ಅವುಗಳನ್ನು ಸುರಕ್ಷಿತ ಕೊಠಡಿಗಳಲ್ಲಿವೆ. ವೈದ್ಯರಿಗೆ ಪ್ರತ್ಯೇಕ ಕೊಠಡಿ ಅಭಾವ ಇದೆ. -ಡಾ| ಹನುಮಂತರೆಡ್ಡಿ, ಪ್ರಭಾರಿ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next