Advertisement
ಲೋಕಸಭೆ ಚುನಾವಣೆ ಸಿದ್ಧತೆ ಕುರಿತಂತೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಜಿಲ್ಲಾ ಮುಖಂಡರು ಹಾಗೂ ರಾಜ್ಯ ಪದಾಧಿಕಾರಿಗಳನ್ನೊಳಗೊಂಡ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಆ ಸಂದರ್ಭದಲ್ಲೇ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಗಿದೆ. ಈಗಾಗಲೇ ಹಾಲಿ ಸಂಸದರಿರುವ9 ಕ್ಷೇತ್ರಗಳಿಗೆ ಅವರನ್ನೇ ಮತ್ತೆ ಅಭ್ಯರ್ಥಿಗಳನ್ನಾಗಿ ಮಾಡಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಆದರೆ, ಕಾಂಗ್ರೆಸ್ ಸಂಸದರಿರುವ ಕೆಲವು ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಜೆಡಿಎಸ್ ಈಗಾಗಲೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಕ್ಷೇತ್ರಗಳತ್ತ ದೃಷ್ಟಿ ಬೀರಿದ್ದು, ಅವುಗಳು ಕಾಂಗ್ರೆಸ್‌ಗೆ ಕೈ ತಪ್ಪುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಮಾಡಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನೂ ಕಣಕ್ಕಿಳಿಸಬೇಕೆನ್ನುವ ಅಭಿಪ್ರಾಯ ಕಾಂಗ್ರೆಸ್‌ನ ಕೆಲವು ನಾಯಕರದ್ದಾಗಿದೆ ಎಂದು ಹೇಳಲಾಗುತ್ತಿದೆ. ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ಈಶ್ವರ್ ಖಂಡ್ರೆ ಅಥವಾ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ವಿಧಾನ ಪರಿಷತ್ ಸದಸ್ಯ ವಿಜಯ್ ಧರ್ಮಸಿಂಗ್ ಮೇಲೆ ಪಕ್ಷದ ನಾಯಕರು ಕಣ್ಣಿಟ್ಟಿದ್ದಾರೆ. ಬೆಂಗಳೂರು ಉತ್ತರಕ್ಕೆ ಕೃಷ್ಣ ಬೈರೇಗೌಡ, ಬೆಳಗಾವಿಗೆ-ಸತೀಶ್ ಜಾರಕಿಹೊಳಿ, ಬೆಂಗಳೂರು ಕೇಂದ್ರಕ್ಕೆ-ರೋಷನ್ ಬೇಗ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ಪಡೆಯಬಹುದೆಂಬ ಆಲೋಚನೆ ರಾಜ್ಯ ನಾಯಕರದ್ದಾಗಿದೆ. ವಿಜಯಪುರದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ, ಕೊಪ್ಪಳಕ್ಕೆ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ಧಾರವಾಡ-ವಿನಯ್ ಕುಲಕರ್ಣಿ ಹಾಗೂ ಸಂತೋಷ್ ಲಾಡ್, ದಕ್ಷಿಣ ಕನ್ನಡದಲ್ಲಿ ರಮಾನಾಥ ರೈ, ಬೆಂಗಳೂರು ದಕ್ಷಿಣಕ್ಕೆ-ಪ್ರಿಯಾ ಕೃಷ್ಣ, ಹಾವೇರಿಗೆ-ಡಿ.ಆರ್. ಪಾಟೀಲ್ ಪ್ರಭಲ ಅಭ್ಯರ್ಥಿಗಳಾಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತು ನಷ್ಟ ಅನುಭವಿಸಿರುವ ಬಹುತೇಕ ಮಾಜಿ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು
ಹಾಕುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಭವಿಷ್ಯ ಅತಂತ್ರವಾಗಿರುವುದರಿಂದ ಲೋಕಸಭೆಗೆ ಸ್ಪರ್ಧಿಸಿ, ಮತ್ತೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ, ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿದರೆ ಮರಳಿ ರಾಜ್ಯ ರಾಜಕಾರಣಕ್ಕೆ ಬರುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಅನೇಕ ಮಾಜಿ ಹಾಗೂ ಹಾಲಿ ಶಾಸಕರು
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಶಂಕರ ಪಾಗೋಜಿ