Advertisement

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

06:02 PM Dec 28, 2024 | Team Udayavani |

ಕೊಪ್ಪಳ: ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್‌ ಖಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಈ ಖಾಯಿಲೆ ಸದ್ದು ಮಾಡಲಾರಂಭಿಸಿದ್ದು, ಕಳೆದ 5 ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬಂದಿರುವ ಜನರ ರಕ್ತಪರೀಕ್ಷೆ ಮಾಡಿದ ಜನರ ಪೈಕಿ 114 ಜನರಲ್ಲಿ ಕ್ಯಾನ್ಸರ್‌ ಖಾಯಿಲೆ ಪತ್ತೆಯಾಗಿದೆ. ಆದರೆ ಕೊಪ್ಪಳದಲ್ಲಿ ಮೆಡಿಕಲ್‌ ಕಾಲೇಜು ಇದ್ದರೂ ಇಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಇಲ್ಲದಂತಾಗಿದೆ.

Advertisement

ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ಸಣ್ಣ ಪುಟ್ಟ ರೋಗಕ್ಕೂ ಹುಬ್ಬಳ್ಳಿ-ಧಾರವಾಡ, ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುವ ಸ್ಥಿತಿ ಇತ್ತು. ಆದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಆಸ್ಪತ್ರೆಯ ಸೌಕರ್ಯಗಳಲ್ಲಿ ಸ್ವಲ್ಪ ಬದಲಾವಣೆ ಕಂಡಿದೆ. ಕೊಪ್ಪಳದಲ್ಲಿ ಮೆಡಿಕಲ್‌ ಕಾಲೇಜು ಆರಂಭವಾದ ಬಳಿಕ ಆಸ್ಪತ್ರೆಯ ಸೌಕರ್ಯಗಳಲ್ಲಿ ಬದಲಾವಣೆ ಬಂದಿದೆ ಆದರೂ ಕ್ಯಾನ್ಸರ್‌ ಖಾಯಿಲೆಗೆ ಇಲ್ಲಿ ಚಿಕಿತ್ಸೆ ಇಲ್ಲ ಎಂದೆನ್ನುವುದೇ ಬೇಸರದ ಸಂಗತಿ.

ಪ್ರಸ್ತುತ ಆರೋಗ್ಯ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿನ ಜನತೆ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ನಾನಾ ಖಾಯಿಲೆಗಳಿಗೆ ಚಿಕಿತ್ಸೆಗೆ ಆಗಮಿಸಿದ ವೇಳೆ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸುವ
ರೋಗಿಗಳಲ್ಲಿ ರಕ್ತ ಪರೀಕ್ಷೆ ಮಾಡಿದ ವೇಳೆ ಸಂಶಯಾಸ್ಪದ ಎಂದು ಗೊತ್ತಾದ ಬಳಿಕ ಅಂಥ ರೋಗಿಗಳ ರಕ್ತ ಪರೀಕ್ಷೆಗೆ ಉನ್ನತ ಪ್ರಯೋಗಾಲಯಕ್ಕೆ ಕಳುಹಿಸಿ ಕ್ಯಾನ್ಸರ್‌ ಖಾಯಿಲೆ ಇರುವಿಕೆ ಬಗ್ಗೆ ಪತ್ತೆ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 114 ಜನರಲ್ಲಿ
ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಅವರೆಲ್ಲರೂ ನಾನಾ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಸರದ ಸಂಗತಿಯೆಂದರೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿನ ಜನತೆ ಸರಿಯಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಖಾಯಿಲೆ ಇರುವಿಕೆ ಬಗ್ಗೆ ಹೆದರುತ್ತಿದ್ದಾರೆ. ಕ್ಯಾನ್ಸರ್‌ ಖಾಯಿಲೆ ಆರಂಭಿಕ ಹಂತದಲ್ಲಿ ಜನರಿಗೆ ಗೊತ್ತಾಗಲ್ಲ. 3 ಮತ್ತು 4ನೇ ಹಂತಕ್ಕೆ ಬಂದಾಗ ತಮಗೆ ಕ್ಯಾನ್ಸರ್‌ ಇರುವಿಕೆ ಪತ್ತೆಯಾಗುತ್ತದೆ.

ಆರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಮೂಲಕ ರೋಗ ನಿವಾರಣೆ ಮಾಡಬಹುದು ಎಂದೆನ್ನುತ್ತಾರೆ ವೈದ್ಯ ವಲಯ. ಆದರೆ ಜಿಲ್ಲೆಯಲ್ಲಿನ ಜನತೆ ಇಂದಿನ ದುಬಾರಿ ವೆಚ್ಚದಾಯಕ ಆಸ್ಪತ್ರೆಯ ಕಾಲಘಟ್ಟದಲ್ಲಿ ನಮಗ್ಯಾಕೆ ರಕ್ತ ಪರೀಕ್ಷೆ ಎಂದು ಭಯಪಟ್ಟು ತಪಾಸಣೆ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಕೊನೆಯ ಹಂತದಲ್ಲಿ ಖಾಯಿಲೆಯಿಂದ ಬಳಲಿ ನೋವು ಅನುಭವಿಸುವಂತಹ ಸ್ಥಿತಿ ಎದುರಾಗುತ್ತಿದೆ.

Advertisement

ಇಲ್ಲಿ ವಿಶೇಷವೆಂದರೆ 114 ಕ್ಯಾನ್ಸರ್‌ ಪೀಡಿತರು ಪತ್ತೆಯಾಗಿರುವುದು ಸರ್ಕಾರಿ ಆಸ್ಪತ್ರೆಗಳಿಗೆ ಬೇರೆ ಖಾಯಿಲೆಗಳಿಗೆ ಚಿಕಿತ್ಸೆಗೆ ಬಂದಾಗ ಇವರಿಗೆ ಕ್ಯಾನ್ಸರ್‌ ಖಾಯಿಲೆ ಇದೆ ಎನ್ನುವುದು ರಕ್ತ ಪರೀಕ್ಷೆ ಮಾಡಿದಾಗ ಗೊತ್ತಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಅವರ ಅಂಕಿ-ಸಂಖ್ಯೆಯು ಸರ್ಕಾರಿ ಆಸ್ಪತ್ರೆಗಳ ಡಾಟಾ ಬೇಸ್‌ ನಲ್ಲಿ ದಾಖಲಾಗುತ್ತಿಲ್ಲ. ಕೆಲವರು ಖಾಯಿಲೆ
ಇರುವಿಕೆಯನ್ನು ಗೌಪ್ಯವಾಗಿಯೇ ಇಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ನಿಖರವಾಗಿ ಕ್ಯಾನ್ಸರ್‌ ಖಾಯಿಲೆ ಇರುವಿಕೆಯ ಅಂಕಿ-ಅಂಶಗಳು ಗೊತ್ತಾಗುತ್ತಿಲ್ಲ. ಸರ್ಕಾರವೂ ಈ ಬಗ್ಗೆ ನಿಖರ ದಾಖಲೆಗಳ ನಿರ್ವಹಣಾ ವ್ಯವಸ್ಥೆ ಮಾಡುತ್ತಿಲ್ಲ.

ಕಿಮ್ಸ್‌ನಲ್ಲಿ ಚಿಕಿತ್ಸಾ ವ್ಯವಸ್ಥೆಯೇ ಇಲ್ಲ: ಕ್ಯಾನ್ಸರ್‌ನಲ್ಲಿ ಹಲವಾರು ಬಗೆಯ ವಿಧಗಳಿವೆ. ಆದರೆ ಕೊಪ್ಪಳದಲ್ಲಿ ಸದ್ಯ ಗಂಟಲು ಕ್ಯಾನ್ಸರ್‌, ಬ್ರೆಸ್ಟ್‌ ಕ್ಯಾನ್ಸರ್‌, ಸರ್ವೈಕಲ್‌ ಕ್ಯಾನ್ಸರ್‌ನ ಈ ಮೂರು ವಿಧದ ಪತ್ತೆ ಕಾರ್ಯ ನಡೆದಿದೆ. ಅಚ್ಚರಿಯೆಂದರೆ ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಇದ್ದರೂ ಸಹಿತ ಅಂಕೋಲಾಜಿ ವಿಭಾಗವೇ ಇನ್ನು ಆರಂಭವಾಗಿಲ್ಲ. ಕ್ಯಾನ್ಸರ್‌ಗೆ
ಸಂಬಂಧಿ ಸಿದ ಚಿಕಿತ್ಸೆ ನೀಡುವ ವೈದ್ಯರೂ ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿಲ್ಲ. ಹೀಗಾಗಿ ಇಲ್ಲಿನ ರೋಗಿಗಳಿಗೆ ಕಿಮೋ ಥೆರಪಿ, ಡಯಾಲಿಸಸ್‌ಗೆ ತುಂಬಾ ಸಮಸ್ಯೆಯಾಗುತ್ತಿದೆ.

ಒಟ್ಟಿನಲ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಕ್ಯಾನ್ಸರ್‌ ಸಂಬಂಧಿತ ಚಿಕಿತ್ಸೆಗಳು ಆರಂಭವಾಗಬೇಕಿದೆ. ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಜೀವ ಉಳಿಸುವ ಕಾರ್ಯ \ಸರ್ಕಾರದಿಂದ ಮಾಡಬೇಕಿದೆ. ಅಂಕೋಲಾಜಿ ವಿಭಾಗ ಆರಂಭಿಸಿ ಜನ ಸೇವೆಗೆ ಸರ್ಕಾರ, ಜಿಲ್ಲಾಡಳಿತ ಒತ್ತು

ನಮ್ಮಲ್ಲಿ ಮೂರು ವಿಧದ ಕ್ಯಾನ್ಸರ್‌ ಪತ್ತೆ ಮಾಡಲಾಗುತ್ತಿದೆ. ಕಳೆದ ಐದು ವರ್ಷದಲ್ಲಿ 114 ಜನರಲ್ಲಿ ಕ್ಯಾನ್ಸರ್‌ ಇರುವಿಕೆ ಬಗ್ಗೆ ಪತ್ತೆಯಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಸರ್ಕಾರಿ ಆಸ್ಪತ್ರೆಗೆ ಬೇರೆ ಕಾರಣಕ್ಕೆ ಚಿಕಿತ್ಸೆಗೆ ಬಂದ ರೋಗಿಗಳು. ಅವರ ರಕ್ತ ಪರೀಕ್ಷೆ ಮಾಡಿದ ವೇಳೆ ರೋಗ ಪತ್ತೆಯಾಗಿದೆ. ಖಾಯಿಲೆ ಪತ್ತೆಯಾದ ರೋಗಿಗಳಿಗೆ ಬೇರೆ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

●ಡಾ|ನಂದಕುಮಾರ,
ಸರ್ವೆಲೆನ್ಸ್‌ ಅಧಿಕಾರಿ, ಕೊಪ್ಪಳ

■ ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next