Advertisement

ಪ್ರಯಾಣಿಕರಿಗಿಲ್ಲ ಬಸ್‌ ತಂಗುದಾಣ

08:44 AM Mar 15, 2019 | Team Udayavani |

ಬಸವಕಲ್ಯಾಣ: ಬೀದರ ನಂತರ ಬಸವಕಲ್ಯಾಣ ನಗರ ದಿನೇ ದಿನೇ ಬೆಳೆಯಲಾರಂಭಿಸಿದೆ. ಇದಕ್ಕೆ ತಕ್ಕಂತೆ ಬೆಳಗ್ಗೆಯಿಂದ
ಸಂಜೆ ವರೆಗೆ ಪ್ರಯಾಣಿಕರು ಸಂಚರಿಸುವ ಸಂಖ್ಯೆಯು ಹೆಚ್ಚಾಗಿದೆ. ಆದರೆ ನಗರದಲ್ಲಿ ಬಸ್‌ ತಂಗುದಾಣ ಇಲ್ಲದ ಕಾರಣ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿ ಕಡು ಬಿಸಿಲಲ್ಲಿ ಬಸ್‌ಗಾಗಿ ಕಾಯುವಂತ ಸ್ಥಿತಿ ಇಲ್ಲಿದೆ.

Advertisement

ನಗರದ ಬಸ್‌ ನಿಲ್ದಾಣದಿಂದ ಹಿಡಿದು ನಾರಾಯಣಪುರ ಕ್ರಾಸ್‌, ಟೂರಿಸ್ಟ್‌ ಲಾಡ್ಜ್, ಹಳೇ ತಹಶೀಲ್ದಾರ್‌ ಕಚೇರಿ ಎದುರು, ಹರಳಯ್ಯ ವೃತ್ತ ಮತ್ತು ರಾಷ್ಟ್ರೀಯ ಹೆದ್ದಾರಿ ಬಂಗ್ಲೆ ಹತ್ತಿರ ಪ್ರಯಾಣಿಕರು ಕಡು ಬಿಸಿಲಿನಲ್ಲಿಯೇ ಬಸ್‌ ಗಾಗಿ ಕಾಯುವ ಪ್ರಮುಖ ಸ್ಥಳಗಳಿವು. ಆದರೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ.

ಇದರಿಂದ ಬಸ್‌ ಬರುವವರೆಗೂ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕಾಯುವುದು ಒಂದು ಕಡೆ ಯಾದರೆ, ವೃದ್ಧರು ಮತ್ತು ವಿದ್ಯಾರ್ಥಿನಿಗಳು ಪಕ್ಕದ ಹೋಟೆಲ್‌, ಅಂಗಡಿ ಮುಂದೆ ಹಾಗೂ ಮರದ ಕೆಳಗಡೆ ನಿಂತುಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಆದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ನಗರದ ಯಾವ ವೃತ್ತಗಳಲ್ಲಿ ಮಿನಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಗೂಜಿಗೆ ಹೋಗಿಲ್ಲ. ಇದರಿಂದ ಬೆಳಗ್ಗೆ ಆದರೆ ಶಿಕ್ಷಕಿಯರು, ವಿದ್ಯಾರ್ಥಿನಿಯರು ಸೇರಿದಂತೆ ಪ್ರತಿಯೊಬ್ಬರು ಕೆಂಪು ಮಣ್ಣಿನ ಧೂಳಿನಲ್ಲಿ ರಸ್ತೆ ಪಕ್ಕದಲ್ಲಿ
ನಿಂತು ಕಾಯಬೇಕಾಗಿದೆ. ಇದರಿಂದ ಬಸ್‌ ಹಾಗೂ ಖಾಸಗಿ ವಾಹನ ಚಾಲಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಪ್ರಯಾಣಿಕರ
ಮೇಲಿಂದ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಬಸ್‌ ನಿಲ್ಲುವ ಸ್ಥಳಗಳಲ್ಲಿ ಬಸ್‌ ತಂಗುದಾಣ ನಿರ್ಮಾಣ ಮಾಡಬೇಕು ಎಂಬುವುದು ಪ್ರಯಾಣಿಕರ ಮತ್ತು ನಗರ ನಿವಾಸಿಗಳ ಒತ್ತಾಯವಾಗಿದೆ.

ಬಸವಕಲ್ಯಾಣ ನಗರದಲ್ಲಿ ಯಾವ ಸ್ಥಳದಲ್ಲಿ ಬಸ್‌ ತಂಗುದಾಣ ಸೌಕರ್ಯ ಇಲ್ಲ. ಹಾಗಾಗಿ ಪ್ರಯಾಣಿಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಿಸಿಲು ಮತ್ತು ಧೂಳು ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ಬಸ್‌ಗಾಗಿ ಕಾಯುವಂತಾಗಿದೆ. ಆದ್ದರಿಂದ ಶೀಘ್ರವಾಗಿ ಬಸ್‌ ನಿಲುಗಡೆ ಮಾಡುವ ಪ್ರಮುಖ ಸ್ಥಳದಲ್ಲಿ ಬಸ್‌ ತಂಗುದಾಣ ನಿರ್ಮಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು ಎಂದು ವಿದ್ಯಾರ್ಥಿ ಲೋಕೇಶ ಮೋಳೆಕೇರೆ ಆಗ್ರಹಿಸಿದ್ದಾರೆ. 

„ವೀರಾರೆಡ್ಡಿ ಆರ್‌.ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next