Advertisement

ಬಸ್‌ ತಂಗುದಾಣ ಕೆಡವಿ ವರ್ಷ ಕಳೆದರೂ ಮರು ನಿರ್ಮಾಣವಾಗಿಲ್ಲ

02:10 AM Jun 23, 2018 | Team Udayavani |

ವಿಶೇಷ ವರದಿ – ಮಹಾನಗರ : ಬೆಂದೂರ್‌ ನಲ್ಲಿರುವ ಸಂತ ಆ್ಯಗ್ನೇಸ್‌ ಕಾಲೇಜ್‌ ಬಳಿ ಸುಮಾರು ಒಂದು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ತೆರವುಗೊಳಿಸಿದ್ದ ಬಸ್‌ ತಂಗುದಾಣವನ್ನು ಮಹಾನಗರ ಪಾಲಿಕೆ ಇನ್ನೂ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ದಿನನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೂಕ್ತ ತಂಗುದಾಣ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಬೆಂದೂರ್‌ ನ ಈ ರಸ್ತೆಯಲ್ಲಿ ಹಾಗೂ ಸುತ್ತಮುತ್ತ ಸಂತ ಆ್ಯಗ್ನೇಸ್‌ ಜತೆಗೆ ಸಂತ ಥೆರೆಸಾ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿರುವುದರಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿಯೇ ಬಸ್‌ ಗೆ ಕಾಯಬೇಕು. ಈ ನಿಲ್ದಾಣಕ್ಕೆ ಬೇರೆ ಬೇರೆ ಮಾರ್ಗಗಳಿಂದ ಹೆಚ್ಚಿನ ಸಂಖ್ಯೆಯ ಖಾಸಗಿ ಸಿಟಿ ಬಸ್‌ ಗಳು ಬಂದು ಹೋಗುತ್ತವೆ.

Advertisement

ಇಲ್ಲಿ ಬಸ್‌ ತಂಗುದಾಣವಿಲ್ಲ. ಬಿಸಿಲು, ಮಳೆ-ಗಾಳಿಯಿಂದ ರಕ್ಷಣೆಗೆ ಅಕ್ಕಪಕ್ಕದ ಅಂಗಡಿಗಳಲ್ಲಿ ನಿಲ್ಲಬೇಕಾದ ಸ್ಥಿತಿ. 
ಈ ಪರಿಸರದ ಸುತ್ತ-ಮುತ್ತ ಅನೇಕ ವಸತಿ ಸಂಕೀರ್ಣಗಳಿರುವುದರಿಂದ ಇಲ್ಲಿ ಬಸ್‌ ತಂಗುದಾಣ ಅಗತ್ಯವಿದೆ. ಮಹಾನಗರ ಪಾಲಿಕೆ ನಿರ್ಲಕ್ಷ್ಯವಹಿಸುತ್ತಿರವ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ತಂಗುದಾಣವಿಲ್ಲದ ಕಾರಣ ಚಾಲಕರಿಗೆ ಕೂಡ ಯಾವ ಪ್ರದೇಶದಲ್ಲಿ ಬಸ್‌ ನಿಲ್ಲಿಸಬೇಕು ಎಂಬ ಗೊಂದಲ ಉಂಟಾಗುತ್ತದೆ. ಜತೆಗೆ ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ ಸಹಿತ ಇನ್ನಿತರ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.

ಬೆಳಗ್ಗಿನ ಹೊತ್ತು ಈ ರಸ್ತೆಯಲ್ಲಿನ ಶಾಲೆ – ಕಾಲೇಜು ಪ್ರಾರಂಭವಾಗುವ ವೇಳೆ ಹಾಗೂ ಸಂಜೆ ಹೊತ್ತು ವಿದ್ಯಾರ್ಥಿಗಳು ಶಾಲೆಯಿಂದ ನಿರ್ಗಮಿಸುವ ವೇಳೆ ಬಸ್‌ ಶೆಲ್ಟರ್‌ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಜತೆಗೆ, ಬಸ್‌ ನವರು ನಿರ್ದಿಷ್ಟ ತಂಗುದಾಣವಿಲ್ಲದ ಕಾರಣ ರಸ್ತೆ ಮಧ್ಯದಲ್ಲೇ ಪ್ರಯಾಣಿಕರನ್ನು ಹತ್ತಿಸುವುದು-ಇಳಿಸುವುದು ಮಾಡುವ ಕಾರಣ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಟೆಂಡರ್‌ ಆಗಿದೆ
ಸ್ಥಳೀಯ ಕಾರ್ಪೊರೇಟರ್‌ ಸಬಿತಾ ಮಿಸ್ಕಿತ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಆ್ಯಗ್ನೇಸ್‌ ಕಾಲೇಜು ಬಳಿಯ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಟೆಂಡರ್‌ ಆಗಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ಕೌನ್ಸೆಲ್‌ ಸಭೆಯಲ್ಲಿ ಸಂಬಂಧಪಟ್ಟವರಲ್ಲಿ ಮಾಹಿತಿ ಕೇಳುತ್ತೇನೆ. ಈ ಪ್ರದೇಶದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಈ ಹಿಂದೆ ಇಲ್ಲಿನ ರಿಕ್ಷಾ ಚಾಲಕರು ಸೇರಿದಂತೆ ಸ್ಥಳೀಯರು ವಿರೋಧಿಸಿದ್ದರು. ಆದರೂ ಸಾರ್ವಜನಿಕರ ದೃಷ್ಟಿಯಿಂದ ಕೂಡಲೇ ಈ ಪ್ರದೇಶದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣ ನಿರ್ಮಾಣ ಮಾಡುತ್ತೇವೆ ಎಂದರು.

ಚರ್ಚಿಸಿ ಕ್ರಮ
ಬೆಂದೂರ್‌ ವೆಲ್‌ ಆ್ಯಗ್ನೇಸ್‌ ಕಾಲೇಜು ಪಕ್ಕದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಇರುವ ಅಡೆತಡೆಗಳ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ ಬಳಿ ಚರ್ಚೆ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣ ನಿರ್ಮಾಣ ಮಾಡುತ್ತೇವೆ.
– ಭಾಸ್ಕರ್‌ ಕೆ.,ಮೇಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next