ವರದಿ: ಗೋವಿಂದಪ್ಪ ತಳವಾರ
ಮುಧೋಳ: ಕಾಲೇಜಿಗೆ ತೆರಳಲು ಸೂಕ್ತ ಬಸ್ ಸಂಚಾರವಿಲ್ಲದ ಕಾರಣ ಸುತ್ತಿ ಬಳಸಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಬಹುತೇಕ ಸಮಯವನ್ನು ಕೇವಲ ಪ್ರಯಾಣಕ್ಕಾಗಿಯೇ ಮೀಸಲಿಡುವ ಅನಿವಾರ್ಯತೆ ಎದುರಾಗಿದೆ.
ಯಡಹಳ್ಳಿಯ ಸರ್ಕಾರಿ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜಿಗೆ ತೆರಳುವ ತಾಲೂಕಿನ ಹಲಗಲಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಿತ್ಯ 70 ಕಿ.ಮೀ ಸಂಚರಿಸಬೇಕಾಗಿದೆ. ಹಲಗಲಿಯಿಂದ ಯಡಹಳ್ಳಿಗೆ ನೇರವಾಗಿ ಬಸ್ ಇರದ ಕಾರಣ ಅಮ್ಮಲಝರಿ ಮಾರ್ಗವಾಗಿ ಮುಧೋಳಕ್ಕೆ ಆಗಮಿಸಿ ಅಲ್ಲಿಂದ ಯಡಹಳ್ಳಿಗೆ ತೆರಳಬೇಕಿದೆ. ನಿತ್ಯ ಬಹುತೇಕ ಸಮಯವನ್ನು ಬಸ್ ನಲ್ಲಿಯೇ ಕಳೆಯುವ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.
ಬರೀ 15 ಕಿ.ಮೀ. ದೂರ: ಹಲಗಲಿಯಿಂದ ವಜ್ಜರಮಟ್ಟಿ ಮೂಲಕ ಬಂದರೆ ಯಡಹಳ್ಳಿಯ ಕಾಲೇಜು ಕೇವಲ 15 ಕಿ.ಮೀ ದೂರವಾಗುತ್ತದೆ. ಆದರೆ ವಜ್ಜರಮಟ್ಟಿ ಮೂಲಕ ಸಾರಿಗೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ನಿತ್ಯ ಏಕಮುಖವಾಗಿ 35ರಂತೆ ಒಟ್ಟು 70 ಕಿ.ಮೀ ದೂರ ಪ್ರಯಾಣಿಸಿ ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಇದೆ. ಬಸ್ ಆರಂಭಕ್ಕೆ ಒತ್ತಾಯ: ಯಡಹಳ್ಳಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಮಗೆ ವಜ್ಜರಮಟ್ಟಿ ಮೂಲಕ ಬಸ್ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಿ ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಈ ಮಾರ್ಗದಲ್ಲಿ ಬಸ್ ಸಂಚಾರ ಮಾತ್ರ ಆರಂಭವಾಗಿಲ್ಲ.
ಕೊರೊನಾ ಮುಂಚೆ ಇದೇ ಮಾರ್ಗದಲ್ಲಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಬಸ್ ಸಂಚಾರವಿತ್ತು. ಈಗ ಕಾಲೇಜು ಸಮಯಕ್ಕೆ ಬಸ್ ಆರಂಭಿಸುವಂತೆ ಅಧಿ ಕಾರಿಗಳಿಗೆ ಮನವಿ ಮಾಡಿಕೊಂಡರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು. ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ತೊಂದರೆ: ವಜ್ಜರಮಟ್ಟಿ-ಹಲಗಲಿ ಮಾರ್ಗಕ್ಕೆ ಹೊಂದಿಕೊಂಡಿರುವ ತೋಟಗಳಿಂದ ನಿತ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಜ್ಜರಮಟ್ಟಿ ಗ್ರಾಮದ ಪ್ರೌಢಶಾಲೆಗೆ ಆಗಮಿಸುತ್ತಾರೆ. ಈ ಮಾರ್ಗದಲ್ಲಿ ಬಸ್ ಸಂಚಾರವಿಲ್ಲದ ಕಾರಣ ಪ್ರೌಢಶಾಲೆ ವಿದ್ಯಾರ್ಥಿಗಳು ಕಂಡ ಕಂಡ ಸೈಕಲ್ ಮೋಟರ್ ಸವಾರರಿಗೆ ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುವಂತಾಗಿದೆ. ಒಂದುವೇಳೆ ಸೈಕಲ್ ಮೋಟರ್ ದೊರೆಯದಿದ್ದರೆ ನಿತ್ಯ 5-6 ಕಿ.ಮೀ ಕಾಲ್ನಡಿಗೆಯಲ್ಲಿ ನಡೆದು ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಇದೆ.
ನಿತ್ಯ ಬಸ್ ಸಂಚಾರಕ್ಕೆ ಮನವಿ: ಬೆಳಗ್ಗೆ ಹಾಗೂ ಸಂಜೆ ಕಾಲೇಜು ಸಮಯಕ್ಕೆ ಬಸ್ ಸಂಚಾರ ಕಲ್ಪಿಸಿದರೆ ನಮಗೆ ಸಮಯದ ಉಳಿತಾಯವಾಗುತ್ತದೆ. ಇನ್ನಾದರೂ ಅ ಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬುದು ವಜ್ಜರಮಟ್ಟಿ ಹಾಗೂ ಹಲಗಲಿ ಗ್ರಾಮದ ವಿದ್ಯಾರ್ಥಿಗಳ ಒತ್ತಾಯ. ರೈತಾಪಿ ವರ್ಗಕ್ಕೂ ಅನುಕೂಲ: ವಜ್ಜರಮಟ್ಟಿ-ಹಲಗಲಿ ಗ್ರಾಮದ ಮಧ್ಯೆ ನೀರಾವರಿ ಪ್ರದೇಶ ಹೆಚ್ಚಾಗಿದ್ದು, ಈ ಮಾರ್ಗದಲ್ಲಿ ದಿನನಿತ್ಯ ರೈತಾಪಿ ವರ್ಗದ ಜನರು ಹೆಚ್ಚಾಗಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಓಡಿಸಿದರೆ ಅದರಿಂದ ರೈತಾಪಿ ವರ್ಗಕ್ಕೂ ಹೆಚ್ಚಿನ ಅನುಕೂಲವಾಗಲಿದೆ.