ಶಿರಸಿ: ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳನ್ನು ಬೆಸೆಯುವ ಗಣೇಶಪಾಲ್ ಹೊಳೆಗೆ ಸೇತುವೆ ಭಾಗ್ಯ ಇನ್ನೂ ಸಿಕ್ಕಿಲ್ಲ. ಹಲವು ದಶಕಗಳ ಬೇಡಿಕೆ ಇನ್ನೂ ಗಗನ ಕುಸುಮವೇ ಆಗಿದೆ.
ಶಿರಸಿ ತಾಲೂಕಿನ ಕೊಡ್ನಗದ್ದೆ ಗ್ರಾಪಂ ಹಾಗೂ ಯಲ್ಲಾಪುರ ತಾಲೂಕು ಹಿತ್ಲಳ್ಳಿ ಗ್ರಾಪಂ ವ್ಯಾಪ್ತಿಯ ನಡುವಿನ ಗಣೇಶಪಾಲ್ ಹೊಳೆ ಧಾರ್ಮಿಕ ಹಾಗೂ ಪ್ರವಾಸಿ ತಾಣ. ಗಣೇಶಪಾಲ್ ಎರಡು ತಾಲೂಕಿನ ಸಂಪರ್ಕಕ್ಕೆ ತೀರಾ ಸಮೀಪದ ಕೊಂಡಿಯೂ ಹೌದು. ಜಿಲ್ಲೆ, ಹೊರಜಿಲ್ಲೆಯ ಪ್ರವಾಸಿಗರಿಗೆ ಹತ್ತಿರದ ಮಾರ್ಗ.
ಶಿರಸಿ ತಾಲೂಕಿನ ಹುಲೇಕಲ್, ವಾನಳ್ಳಿ, ಜಡ್ಡಿಗದ್ದೆ, ಕಕ್ಕಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಯಲ್ಲಾಪುರ ತಾಲೂಕಿಗೆ ತೆರಳಲು ಗಣೇಶಪಾಲ್ ಮಾರ್ಗ ಬಹಳ ಸಮೀಪ. ಜಡ್ಡಿಗದ್ದೆಯಿಂದ ಗಣೇಶಪಾಲ್ ಮೂಲಕ ಸಾಗಿದರೆ ಯಲ್ಲಾಪುರ 32ಕಿಮೀ. ಆದರೆ ಹುಲೇಕಲ್ ಸೋಂದಾ ಮೂಲಕ ತೆರಳಿದರೆ 65ಕಿಮೀ ಆಗುತ್ತದೆ. ಕೊಡ್ನಗದ್ದೆ, ವಾನಳ್ಳಿ ಮುಂತಾದ ಗ್ರಾಪಂ ವ್ಯಾಪ್ತಿಯ ರೈತರು ತಾವು ಬೆಳೆದ ಅಡಕೆಯನ್ನು ಉಮ್ಮಚಗಿ, ಯಲ್ಲಾಪುರ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಕ್ಕೆ ಹುಬ್ಬಳ್ಳಿಗೆಹೋಗುತ್ತಾರೆ. ಅವರೆಲ್ಲ ಸುತ್ತುಬಳಸಿ ತೆರಳಬೇಕಾಗುತ್ತದೆ.
ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದೆಡೆಯಿಂದ ಜಡ್ಡಿಗದ್ದೆ ಸಮೀಪದ ಶಿವಗಂಗಾ ಜಲಪಾತ ನೋಡಲು ಬರುವವರೂ ಸುತ್ತಾಟಮಾಡಬೇಕಾಗುತ್ತದೆ. ಗಣೇಶಪಾಲ್ ಹೊಳೆಗೆ ಸೇತುವೆ ನಿರ್ಮಾಣವಾದರೆ ಈ ಎಲ್ಲ ಸಮಸ್ಯೆ ನಿವಾರಣೆಯಗುತ್ತದೆ. ಅಲ್ಲದೇ ಹಿತ್ಲಳ್ಳಿ, ಉಮ್ಮಚಗಿ, ಮಾವಿನಕಟ್ಟಾ ಮುಂತಾದ ಕಡೆಯ ಜನರಿಗೂ ಇದು ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದರಿಂದ ಈ ಮಾರ್ಗದ ಸಂಪರ್ಕ ಕಡಿತಗೊಳ್ಳುತ್ತದೆ.
ಇದನ್ನೂ ಓದಿ:ಮಂಡ್ಯ: ಬೀದಿ ನಾಯಿಗಳ ದಾಳಿಗೆ ಬಲಿಯಾದವು 12 ಕುರಿಗಳು!
ಈ ಕಾರಣದಿಂದ ಸರ್ವಋತು ಸೇತುವೆ ನಿರ್ಮಾಣ ಅಗತ್ಯವಾಗಿದೆ. ಹಿಂದೊಮ್ಮೆ ಈ ಸೇತುವೆ ಮಂಜೂರಾತಿ ಆಗಿತ್ತು. ಆದರೆ ಇಚ್ಛಾಶಕ್ತಿ ಕೊರತೆಯೋ ಏನೋ ಅದು ಮಂಜೂರಾತಿ ಆದದ್ದಷ್ಟೇ ಬಂತು. ಮುಂದೇನೂ ಆಗೇ ಇಲ್ಲ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರ ಮನೆ ದೇವರು ಗಣೇಶಪಾಲ್ ಗಣಪತಿ. ಸ್ಪೀಕರ್ ಕ್ಷೇತ್ರ ಹಾಗೂ ಸಚಿವ ಹೆಬ್ಟಾರ ಅವರ ಕ್ಷೇತ್ರವೂ ಬರುವುದರಿಂದ ಇಬ್ಬರೂ ಒಟ್ಟಾಗಿ ಮನಸ್ಸು ಮಾಡಿದರೆ ಇದು ದೊಡ್ಡ ಸಂಗತಿಯಲ್ಲ.