ಪಣಜಿ: ಪ್ರಸಕ್ತ ವರ್ಷ ಗೋವಾದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಸನ್‍ಬರ್ನ್ ಮಹೋತ್ಸವ ಆಯೋಜಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪುನರುಚ್ಛರಿಸಿದರು.
ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸಲು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಕಂಪನಿಯು ಸಣ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರೆ, ಈ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಗೋವಾದ ವಾಗಾತೋರ್ ಬೀಚ್‍ನಲ್ಲಿ ಸನ್‍ಬರ್ನ್ ಮಹೋತ್ಸವ ಆಯೋಜಿಸಲು ಸಂಘಟಕರು ರಾಜ್ಯ ಸರ್ಕಾರದ ಬಳಿ ಅನುಮತಿ ಕೋರಿದ್ದರು. ಆದರೆ ಸರ್ಕಾರ ಅನುಮತಿ ನೀಡಲು ತಿರಸ್ಕರಿಸಿದ ನಂತರವೂ ಸನ್‍ಬರ್ನ್ ಉತ್ಸವ ನಡೆಸಲಾಗುವುದು ಎಂದು ಸಂಘಟಕರು ಹೇಳಿದ್ದರು. ಈ ಕುರಿತು ಮುಖ್ಯಮಂತ್ರಿಗಳನ್ನು ಸುದ್ಧಿಗಾರರು ಪ್ರಶ್ನಿಸಿದಾಗ- ಯಾವುದೇ ಪರಿಸ್ಥಿತಿಯಲ್ಲಿಯೂ ಪ್ರಸಕ್ತ ಬಾರಿ ಸನ್‍ಬರ್ನ್ ಮಹೋತ್ಸವ ಆಯೋಜಿಸಲು ಪರವಾನಗಿ ನೀಡಲಾಗುವುದಿಲ್ಲ, ಈ ಕುರಿತು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸನ್‍ಬರ್ನ್ ಮಹೋತ್ಸವ ಆಯೋಜಿಸಲು ಆಯೋಜಕರು ಪರವಾನಗಿಗಾಗಿ ಸರ್ಕಾರದ ಬಳಿ ಮನವಿ ಸಲ್ಲಿಸಿದ್ದರು. ಆದರೆ ಕರೋನಾ ಮಹಾಮಾರಿಯ ಭೀತಿಯ ಹಿನ್ನೆಲೆಯಲ್ಲಿ ಸನ್‍ಬರ್ನ್ ಮಹೋತ್ಸವ ರದ್ಧುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ನಿಗಧಿತ ಸಂಖ್ಯೆಯಲ್ಲಿ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಸನ್‍ಬರ್ನ್ ಮಹೋತ್ಸವ ಆಯೋಜಿಸಲಾಗುವುದು ಎಂದು ಸಂಘಟಕರು ಮತ್ತೆ ಹೇಳಿಕೆ ನೀಡಿದ್ದಾರೆ. ಆದರೆ ಪ್ರಸಕ್ತ ಬಾರಿ ಸನ್‍ಬರ್ನ್ ಮಹೋತ್ಸವ ಆಚರಿಸಲು ಯಾವುದೇ ಪರಿಸ್ಥಿತಿಯಲ್ಲೂ ಪರವಾನಗಿ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪುನರುಚ್ಛರಿಸಿರುವುದು ಎಲ್ಲರಲ್ಲೂ ಗೊಂದಲ ಮೂಡಿಸಿದೆ.