Advertisement

ಭಾರತದ ಬಹಿಷ್ಕಾರಕ್ಕೆ ಮಣಿದು ಗೌರವದ ಬಗ್ಗೆ ಚೀನ ಮಾತು

01:15 PM May 15, 2017 | Team Udayavani |

ಬೀಜಿಂಗ್‌: ಒನ್‌ ಬೆಲ್ಟ್, ಒನ್‌ ರೋಡ್‌ ಶೃಂಗ ಸಭೆಯನ್ನು ಭಾರತ ಬಹಿಷ್ಕರಿಸಿದ ಬೆನ್ನಲ್ಲೇ ಮೃದು ಧೋರಣೆಯತ್ತ ವಾಲಿರುವ ಚೀನ, ಶೃಂಗಸಭೆಯಲ್ಲಿ ಮೆಲು ದನಿಯಲ್ಲಿ ಮಾತನಾಡಿದೆ. ರವಿವಾರ ಬೆಳಗ್ಗೆ ಶೃಂಗ ಸಭೆಗೆ ಚಾಲನೆ ನೀಡಿ ಮಾತನಾಡಿದ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ‘ಪ್ರತಿ ದೇಶವೂ ಮತ್ತೂಂದು ದೇಶದ ಸಾರ್ವಭೌಮತ್ತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎನ್ನುವ ಮೂಲಕ ಭಾರತ ತನ್ನ ನಿಲುವು ಬದಲಿಸಬೇಕು ಎಂದು ಪರೋಕ್ಷ ಮನವಿ ಮಾಡಿದಂತಿದೆ.

Advertisement

ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಚೀನ ನಡೆಸುತ್ತಿರುವ ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪೆಕ್‌) ಮೂಲಕ ಭಾರತದ ಸಾರ್ವಭೌಮತೆ ವಿಷಯದಲ್ಲಿ ಮೂಗು ತೂರಿಸುತ್ತಿದೆ. ಪರೋಕ್ಷವಾಗಿ ಈ ಭಾಗ ಪಾಕಿಸ್ಥಾನದ್ದು ಎಂದು ಬಿಂಬಿಸಲು ಹೊರಟಿದೆ ಎಂಬ ಕಾರಣಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಭಾರತ ಶನಿವಾರ ನಿರಾಕರಿಸಿತ್ತು. ಅಲ್ಲದೆ ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಯೋಜನೆಗೆ ತನ್ನ ಸಹಮತವಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿತ್ತು. ಇದರೊಂದಿಗೆ ಶೃಂಗಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಅಂತಲೂ ಸ್ಪಷ್ಟಪಡಿಸಿತ್ತು.

ಭಾರತದ ಈ ನಿಲುವಿನ ನಂತರ ಮಾತಿನ ವರಸೆಯನ್ನೇ ಬದಲಿಸಿರುವ ಚೀನ ಅಧ್ಯಕ್ಷ, ಆರ್ಥಿಕ ಕಾರಿಡಾರ್‌ನ ಮಹತ್ವ, ಅದು ಜಗತ್ತನ್ನೇ ಸಂಪರ್ಕಿಸುವ ಯೋಜನೆ ಎನ್ನುವ ಮೂಲಕ ಭಾರತದ ಮನವೊಲಿಸಲು ಯತ್ನಿಸಿದ್ದಾರೆ. ‘ಪ್ರತಿ ದೇಶವೂ ಇತರ ದೇಶಗಳ ಅಭಿವೃದ್ಧಿ ಮತ್ತು ಸಾಮಾಜಿಕ ವ್ಯವಸ್ಥೆ ಹಾಗೂ ಪರಸ್ಪರರ ಸಾಮೂಹಿಕ ಆಸಕ್ತಿಗಳಿಗೆ ಮನ್ನಣೆ ನೀಡಬೇಕು,’ ಎಂದು ಜಿನ್‌ಪಿಂಗ್‌ ಹೇಳಿದ್ದಾರೆ.

‘ಒನ್‌ ಬೆಲ್ಟ್ ಒನ್‌ ರೋಡ್‌ ಯೋಜನೆಯಿಂದ ದೇಶ ದೇಶಗಳ ನಡುವಿನ ಸಂಪರ್ಕ ಮತ್ತಷ್ಟು ಸುಧಾರಣೆಯಾಗಲಿದೆ. ಈ ಮಹತ್ವಾಕಾಂಕ್ಷಿ ಒಪ್ಪಂದದಲ್ಲಿ ಭಾಗಿಯಾಗುವ ದೇಶಗಳ ಮಧ್ಯೆ ರಸ್ತೆ, ರೈಲು, ಬಂದರು ಸೇರಿದಂತೆ ಮೂಲ ಸೌಕರ್ಯ, ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಯಾಗಲಿದ್ದು, ಇದು ಆಮದು ಮತ್ತು ರಫ್ತು ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಲಿದೆ,’ ಎಂದಿರುವ ಚೀನ ಅಧ್ಯಕ್ಷ, 128 ಬಿಲಿಯನ್‌ಡಾಲರ್‌ ವೆಚ್ಚದ ಬೆಲ್ಟ್ ಆಂಡ್‌ ರೋಡ್‌ ಯೋಜನೆಯನ್ನು ‘ಶತಮಾನದ ಯೋಜನೆ’ ಎಂದು ಕರೆದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಪಾಕಿಸ್ಥಾನ ಪ್ರಧಾನಿ ನವಾಜ್‌ ಷರೀಫ್, ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ ಸೇರಿದಂತೆ 29 ದೇಶಗಳ ನಾಯಕರು ಹಾಗೂ 130 ದೇಶಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತದಿಂದ ಸರಕಾರದ ಮಟ್ಟದಲ್ಲಿ ಯಾರೂ ಪಾಲ್ಗೊಳ್ಳದಿದ್ದರೂ ತಜ್ಞರ ರೂಪದಲ್ಲಿ ಕೆಲವರು ಭಾಗಿಯಾಗಿದ್ದರು. ಅಮೆರಿಕದಿಂದಲೂ ಬಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next