ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ಒಂದೇ ದಿನ (ಆ.20) ಬಾಕಿ ಇದೆ. ಈ ಹಿಂದಿನ ವರ್ಷಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಎಂದರೆ ಕನ್ನಡ ಚಿತ್ರರಂಗದಲ್ಲಿ ಏನೋ ಒಂದು ಸಂಭ್ರಮ ಮನೆ ಮಾಡುತ್ತಿತ್ತು. ಸ್ಟಾರ್ ಸಿನಿಮಾಗಳ ರಿಲೀಸ್, ಸ್ಟಾರ್‌ಗಳ ಸಿನಿಮಾ ಅನೌನ್ಸ್, ಟೀಸರ್, ಟ್ರೇಲರ್ ಬಿಡುಗಡೆ.. ಹೀಗೆ ಒಂದಲ್ಲ ಒಂದು ವಿಚಾರದ ಮೂಲಕ ಕನ್ನಡ ಚಿತ್ರರಂಗ ಆ್ಯಕ್ಟೀವ್ ಆಗಿರುತ್ತಿತ್ತು. ಆದರೆ ಕಳೆದ ವರ್ಷದಿಂದೀಚೆಗೆ ಆ ಸಂಭ್ರಮ ಮಾಯವಾಗಿದೆ. ಅದಕ್ಕೆಕಾರಣ ಕೋವಿಡ್ ಅಲೆ ಎಂದು ಪ್ರತ್ಯೇಕವಾಗಿ ಹೇಳುವಂತಿಲ್ಲ.
ಈ ವರ್ಷವೂ ವರಮಹಾಲಕ್ಷ್ಮೀಗೆ ದೊಡ್ಡ ಮಟ್ಟದ ಗಿಫ್ಟ್ ಚಿತ್ರರಂಗದಿಂದ ಸಿಗುತ್ತಿಲ್ಲ. ಯಾವುದೇ ಸ್ಟಾರ್ ಸಿನಿಮಾಗಳ ಘೋಷಣೆಯಾಗಲಿ, ರಿಲೀಸ್ ಆಗಲಿ ಇಲ್ಲ. ಬದಲಾಗಿ, ಈ ಬಾರಿ ಸ್ವಲ್ಪ ಆ್ಯಕ್ಟೀವ್ ಆಗಿರೋದು ಹೊಸಬರೇ. ಅದು ಹೇಗೆ ಎಂದು ನೀವು ಕೇಳಬಹುದು. ತಮ್ಮ ಸಿನಿಮಾ ಬಿಡುಗಡೆಯ ಜೊತೆಗೆ ಟೀಸರ್, ಟ್ರೇಲರ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಮೂರು ಸಿನಿಮಾ ರಿಲೀಸ್ ವರಮಹಾಲಕ್ಷ್ಮೀ ಹಬ್ಬಕ್ಕೆ ಈ ಬಾರಿ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಮೂರೂ ಚಿತ್ರಗಳ ಹೊಸಬರದ್ದೆಂಬುದು ಗಮನಾರ್ಹ. “ಶಾರ್ದೂಲ’, “ಜೀವನ ನಾಟಕ ಸ್ವಾಮಿ’ ಹಾಗೂ “ಗ್ರೂಫಿ’ ಚಿತ್ರಗಳು ಈ ವಾರ (ಆ.20) ಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹೊಸಬರು ಧೈರ್ಯ ಮಾಡಿ ತಮ್ಮ ಸಿನಿಮಾ ಬಿಡುಗಡೆಯನ್ನು ಮಾಡುತ್ತಿದ್ದಾರೆ. ಸ್ಟಾರ್ ಸಿನಿಮಾಗಳು ಹಂಡ್ರೆಡ್ ಪರ್ಸೆಂಟ್ ಪ್ರವೇಶಾತಿಗೆ ಕಾಯುತ್ತಿರುವ ಹೊತ್ತಿನಲ್ಲಿ ಹೊಸಬರ ಈ ಧೈರ್ಯವನ್ನು ಮೆಚ್ಚಿ ಬೆಂಬಲಿಸಲೇಬೇಕು.
ಇದನ್ನೂ ಓದಿ:ಕದ್ದು ಮುಚ್ಚಿ ಎಂಗೇಜ್ ಆದ್ರಾ ಕ್ಯಾಟ್ ? ಶೀಘ್ರವೆ ಕತ್ರಿನಾ ಕಲ್ಯಾಣ ?
ಟೀಸರ್, ಟ್ರೇಲರ್, ಸಾಂಗ್ ರಿಲೀಸ್ ಈ ಬಾರಿ ಅನೇಕ ಸಿನಿಮಾಗಳು ತಮ್ಮ ಸಿನಿಮಾದ ಟ್ರೇಲರ್, ಟೀಸರ್, ಹಾಡು, ಫಸ್ಟ್‌ಲುಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಶಿವರಾಜ್‌ಕುಮಾರ್ ಅಭಿನಯದ “ಭಜರಂಗಿ-2′ ಚಿತ್ರದ ಮೂರನೇ ಲಿರಿಕಲ್ ವಿಡಿಯೋ ಆಗಸ್ಟ್ 20ರಂದು ಬಿಡುಗಡೆಯಾದರೆ, ಅಜೇಯ್ ರಾವ್ ಅವರ “ಶೋಕಿವಾಲ’ ಚಿತ್ರದ ಹಾಡು ಕೂಡಾ ಬಿಡುಗಡೆಯಾಗಲಿದೆ. ಇದರ ಜೊತೆಗೆ “ರತ್ನನ್ ಪ್ರಪಂಚ’ ಚಿತ್ರದ ಟ್ರೇಲರ್, “ಕಟ್ಲೆ’, “ರಾಣಾ’ ಸೇರಿದಂತೆ ಇನ್ನು ಅನೇಕ ಸಿನಿಮಾಗಳು ತಮ್ಮ ಫಸ್ಟ್‌ಲುಕ್‌ಗಳು ಬಿಡುಗಡೆಯಾಗಲಿವೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವರಮಹಾಲಲಕ್ಷ್ಮೀ ಹಬ್ಬಕ್ಕೆ ವಿಜಯ್ ನಟನೆಯ “ಸಲಗ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಶೇ50 ಪ್ರವೇಶಾತಿಗೆ ಅನುಮತಿ ನೀಡಿರುವುದರಿಂದ ಆ ಚಿತ್ರ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ.