Advertisement

ಮೂಲಭೂತ ಹಕ್ಕು ಕಿತ್ತುಕೊಳ್ಳುವಂತಿಲ್ಲ: ಹೈಕೋರ್ಟ್‌

07:53 AM Feb 03, 2018 | |

ಬೆಂಗಳೂರು: ಬಂದ್‌ ಆಚರಣೆ ಅಸಾಂವಿಧಾನಿಕ ಕ್ರಮ ಎಂದಿರುವ ಹೈಕೋರ್ಟ್‌, ಬಂದ್‌ ಹೆಸರಲ್ಲಿ ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿದೆ. ಮಹದಾಯಿ ವಿಚಾರದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷ ಫೆ.4ರಂದು ಕರೆ ನೀಡಿದ್ದ ಬೆಂಗಳೂರು ಬಂದ್‌ ಪ್ರಶ್ನಿಸಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ. ರಾಜಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ ರಮೇಶ್‌ ಹಾಗೂ ನ್ಯಾ. ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಸುಪ್ರೀಂಕೋರ್ಟ್‌ ತೀರ್ಪು ಉಲ್ಲೇಖೀಸಿ ಬಂದ್‌ ಆಚರಣೆ ಅಸಾಂವಿಧಾನಿಕ ಎಂದು ತೀರ್ಪು ನೀಡಿತು. 

Advertisement

ಸುಪ್ರೀಂಕೋರ್ಟ್‌ ಬಂದ್‌ ಆಚರಣೆ ಸಂವಿಧಾನ ಹಾಗೂ ಕಾನೂನು ಬಾಹಿರ ಕ್ರಮ ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷ ಫೆ.4ರಂದು ಕರೆ ನೀಡಿರುವ ಬೆಂಗಳೂರು ಬಂದ್‌ ಅಸಾಂವಿಧಾನಿಕವಾಗಿದ್ದು, ಬಂದ್‌ಗೆ ಸಂಬಂಧಿಸಿದ ಮುಂದಿನ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು. ಜನಸಾಮಾನ್ಯರು, ವ್ಯಾಪಾರ – ವಹಿವಾಟು ಉದ್ಯಮಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತು.

ಶಾಂತಿಯುತ ಪ್ರತಿಭಟನೆ, ಹರತಾಳಗಳನ್ನು ಯಾರು ಬೇಕಾದರೂ ಶಾಂತಿಯುತವಾಗಿ ನಡೆಸಲಿ. ಆದರೆ ಬಂದ್‌ ಹೆಸರಿನಲ್ಲಿ ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳದಂತೆ ಕ್ರಮಗಳನ್ನು ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು. 

ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಸುನೀಲ್‌. ಆರ್‌. ರಾವ್‌ ವಾದಿಸಿ, ಕೇವಲ ಹತ್ತುದಿನಗಳ ಅಂತರದಲ್ಲಿ ಕನ್ನಡಪರ ಸಂಘಟನೆಗಳು ಕರೆದಿರುವ ಬಂದ್‌ ಇದಾಗಿದ್ದು, ಜನಸಾಮಾನ್ಯರಿಗೆ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಯಾಗಲಿದೆ. ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ. ಈಗಾಗಲೇ ಬಂದ್‌ ನಡೆಸುವುದು ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್‌ ಹಾಗೂ ಹಲವು ಹೈಕೋರ್ಟ್‌ಗಳು ತೀರ್ಪು ನೀಡಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ತೀರ್ಪು ಉಲ್ಲೇಖಾರ್ಹ: ಬಂದ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಉಲ್ಲೇಖೀಸಿ ಹೈಕೋರ್ಟ್‌ ನೀಡಿರುವ ಈ ತೀರ್ಪು ಇನ್ನು ಮುಂದೆ ದೇಶದ ಯಾವುದೇ ರಾಜ್ಯಗಳಲ್ಲಿ ನಡೆಸುವ ಬಂದ್‌ ಸಂದರ್ಭದ ಅರ್ಜಿಗಳಿಗೆ ಉಲ್ಲೇಖವಾಗಲಿದೆ. ಜತೆಗೆ ರಾಜ್ಯದಲ್ಲಿಯೂ
ಮುಂದಿನ ದಿನಗಳಲ್ಲಿ ಬಂದ್‌ಗೆ ಕರೆ ನೀಡಿದರೆ ಅದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಪಿನ “ಆಧಾರ’ ಸಿಕ್ಕಂತಾಗಿದೆ. ಮೊದಲಿನಿಂದಲೂ ಬಂದ್‌ ಕರೆ ವಿಚಾರದಲ್ಲಿ ರಾಜ್ಯದಲ್ಲಿ ವಾಣಿಜ್ಯೋದ್ಯಮ ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳಿಂದ ಪರ-ವಿರೋಧ ಅಭಿಪ್ರಾಯಗಳಿತ್ತು. ಇದೀಗ ಹೈಕೋರ್ಟ್‌ನ ತೀರ್ಪು “ಬಂದ್‌’ ಕರೆ ನೀಡುವವರಿಗೆ ಎಚ್ಚರಿಕೆಗಂಟೆಯಾಗಿದೆ.

Advertisement

ನಾಳೆ ಬಂದ್‌ ಇರಲ್ಲ
ಈ ಆದೇಶ ಹಿನ್ನೆಲೆಯಲ್ಲಿ ಫೆ.4 ರಂದು ಕರೆ ನೀಡಿದ್ದ ಬಂದ್‌ ವಾಪಸ್‌ ಪಡೆಯಲಾಗಿದೆ ಎಂದು ವಾಟಾಳ್‌ ನಾಗರಾಜ್‌ ಪ್ರಕಟಿಸಿದ್ದಾರೆ. ಬಂದ್‌ ಬದಲಿಗೆ ಕರಾಳ ದಿನಾಚರಣೆ ಆಚರಿಸಲಾ ಗುವುದು ಎಂದು ತಿಳಿಸಿದ್ದಾರೆ. ಫೆ.4 ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾ  ರೋಪಕ್ಕೆ ಪ್ರಧಾನಿ ನರೇಂದ್ರಮೋದಿ ಪಾಲ್ಗೊಳ್ಳಲಿದ್ದ ಕಾರಣ ಬಂದ್‌ ಕರೆ ಹಿನ್ನೆಲೆಯಲ್ಲಿ ನಗರದ ಪೊಲೀ 
ಸರಿಗೂ ಕಾನೂನು -ಸುವ್ಯವಸ್ಥೆ ಪಾಲನೆ ಹಾಗೂ ಬಂದೋ ಬಸ್ತ್ ತಲೆನೋವಾಗಿತ್ತು. 

ಬಂದ್‌ ಆಚರಣೆ ಸಂವಿಧಾನ ಬಾಹಿರ ಎಂದ ಹೈಕೋರ್ಟ್‌
ಫೆ.4ರ ಬೆಂಗಳೂರು ಬಂದ್‌ಗೆ ನಿರ್ಬಂಧ 
ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next