Advertisement

ಮತಾಂತರ ಮಾಡಿದರೆ ಕನಿಷ್ಠ1 ವರ್ಷ ಜಾಮೀನು ಸಿಗಬಾರದು: ಮುತಾಲಿಕ್

06:44 PM Oct 01, 2021 | Team Udayavani |

ಬೀದರ್ : ರಾಜ್ಯಾದ್ಯಂತ ಮತಾಂತರ ಹೆಚ್ಚುತ್ತಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಸಹ ಗಂಭೀರ ಚರ್ಚೆ ಆಗಿದೆ. ಹೀಗಾಗಿ ಮತಾಂತರ ತಡೆಗೆ ಬಿಗಿಯಾದ ಕಾನೂನು ಜಾರಿಗೆ ತರುವುದು ಅವಶ್ಯಕತೆ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶುಕ್ರವಾರ ಸರಕಾರಕ್ಕೆ ಆಗ್ರಹಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲೂ ನಿರಂತರವಾಗಿ ಮತಾಂತರ ನಡೆಯುತ್ತಿದೆ. ಇಲ್ಲಿಯ ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಲಾಗುತ್ತಿದೆ. ಮತಾಂತರ ಮಾಡಿದರೆ ಕನಿಷ್ಠ ಒಂದು ವರ್ಷ ಜಾಮೀನು ಸಿಗಬಾರದು. ಇಂಥಹ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಕಾನೂನು ಜಾರಿಗೆ ತರಲು ಸರಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮಸೀದಿಗಳ್ಲಲಿ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಮಸೀದಿಗಳಲ್ಲಿ ಶಬ್ಧ ಮಾಲಿನ್ಯ ತಡೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶ ಸರಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಈವರೆಗೆ ಪಾಲನೆಯಾಗಿಲ್ಲ. ಹೀಗಾಗಿ ನ್ಯಾಯಾಲಯದ ಆದೇಶ ಕಟ್ಟುನಿಟ್ಟಿನಿಂದ ಜಾರಿಗೆ ತರಲು ಆಗ್ರಹಿಸಿ 7ರಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ರಾತ್ರಿ ೧೦ರಿಂದ ಬೆಳಗ್ಗೆ 9 ರವರೆಗೆ ಶಬ್ಧ ಮಾಲಿನ್ಯ ಆಗಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದೆ. ಆದರೆ ಈ ಆದೇಶವನ್ನು ಜಾರಿಗೆ ತರಬೇಕಾದ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಕಿಡಿಕಾರಿದರು.

‘ಮುಸ್ಲಿಮರ ಪ್ರಾರ್ಥನೆ, ಭಕ್ತಿಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದಿಂದ ಸಮಸ್ಯೆ ಆಗುತ್ತಿದೆ. ಬೆಳಗ್ಗೆ 5 ಗಂಟೆಗೆ ಪ್ರಾರ್ಥನೆ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಮತ್ತು ಉಂಟಾಗುವ ಶಬ್ಧ ಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ. ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಲಾಗುತ್ತಿದೆ ಎಂದ ಮುತಾಲಿಕ್, ದೇವಾಲಯ, ಮಸೀದಿ, ಚರ್ಚ್ ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ಧ ವಲಯಗಳು ಎಂದು ಘೋಷಿಸಲಾಗಿದೆ. ದಿನಕ್ಕೆ ಐದು ಬಾರಿ ಮೈಕ್ ಬಳಸುವ ಮಸೀದಿಗಳಲ್ಲಿನ ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಸರಕಾರ ಕಣ್ಮುಚ್ಚಿ ಕುಳಿತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸರಿಯಲ್ಲ. ದೇಶದಲ್ಲಿ 62 ವರ್ಷ ಒಂದೇ ಮನೆತನದ ನೇತೃತ್ವದಲ್ಲಿ ಆಡಳಿತ ಮಾಡಿರುವ ಕಾಂಗ್ರೆಸ್‌ನವರಿಗೆ ದೇಶ ಭಕ್ತ ಸಂಘಟನೆ ಆಗಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ’ ಎಂದರು .

Advertisement

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next