ರಾಯ್ ಬರೇಲಿ : ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ‘ಬಾಹುಬಲಿಗಳು’ (ಗೂಂಡಾಗಳು) ಇಲ್ಲ, ಇನ್ನು ಬಜರಂಗಬಲಿ ಮಾತ್ರ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಅಮಿತ್ ಶಾ ಅವರು ಶನಿವಾರ (ಫೆ 19) ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ,ಈ ಹಿಂದೆ ಇಡೀ ದೇಶದಲ್ಲಿ ಉತ್ತರ ಪ್ರದೇಶದ ಕ್ರೈಂ ಚರ್ಚೆಯಾಗಿತ್ತು, ರಾಜ್ಯದೆಲ್ಲೆಡೆ ಮಾಫಿಯಾ ಕಾಣಿಸುತ್ತಿತ್ತು, ಇಂದು ಅಜಂ ಖಾನ್, ಅತೀಕ್ ಅಹಮದ್, ಮುಖ್ತಾರ್ ಅನ್ಸಾರಿ ಜೈಲಿನಲ್ಲಿದ್ದಾರೆ, ಮತ್ತೆ ಎಸ್ಪಿ ಬಂದರೆ ಇವರೆಲ್ಲ ಜೈಲಿನಿಂದ ಹೊರ ಬರುತ್ತಾರೆ ಎಂದರು.
ಸಮಾಜವಾದಿ ಪಕ್ಷ ಹೆಚ್ಚು ಮಾಡಿದ್ದೆ ಆಸ್ತಿ ಗಳಿಸುವ ಕೆಲಸ, ಎಸ್ ಎಂದರೆ ಆಸ್ತಿ ಮತ್ತು ಪಿ ಎಂದರೆ ಕುಟುಂಬ. ಅಖಿಲೇಶ್ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬದ ಸುಮಾರು 45 ಜನರನ್ನು ವಿವಿಧ ಹುದ್ದೆಗಳಲ್ಲಿ ಇರಿಸಲಾಗಿತ್ತು ಎಂದು ಕಿಡಿ ಕಾರಿದರು.
ಬಂದಾ ಜಿಲ್ಲೆಯ ತಿಂದವಾರಿ ಅಸೆಂಬ್ಲಿಯಲ್ಲಿ ನಡೆದ ಮತ್ತೊಂದು ಚುನಾವಣಾ ರ್ಯಾಲಿಯಲ್ಲಿ, ಶಾ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ, ಅವರು ದೇಶದಾದ್ಯಂತ ಭಯೋತ್ಪಾದನೆಯನ್ನು ಪೂರೈಸುತ್ತಾರೆ ಎಂದು ಹೇಳಿದರು.
ಅಖಿಲೇಶ್ ಸರ್ಕಾರದ ಅಡಿಯಲ್ಲಿ 2,000 ರೈತರು ಬರಗಾಲದ ಸಮಯದಲ್ಲಿ ಹಸಿವಿನಿಂದ ಸತ್ತರು, ಎಂದು ಶಾ ಆರೋಪಿಸಿದರು.
ಭಾನುವಾರ ಮೂರನೇ ಹಂತದ ಮತದಾನಕ್ಕೆ ಉತ್ತರಪ್ರದೇಶ ಸಾಕ್ಷಿಯಾಗಲಿದ್ದು, 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.