ಬೆಂಗಳೂರು: ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಸಚಿವರು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆದ ಚರ್ಚೆಯಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗಾಗಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆಯಿಲ್ಲ ಎಂದರು.
ಕೋವಿಡ್ ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ, ಕಿರಿಕಿರಿ ಅನ್ನಿಸಿದರೂ ಮಾಸ್ಕ್ ಮರೆಯಬೇಡಿ ಎಂದು ಪ್ರಧಾನಿ ಮೋದಿ ಅವರು ನಿನ್ನೆ ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಏಳು ರಾಜ್ಯಗಳ ಸಿಎಂಗಳಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಬಗ್ಗೆ ಎಚ್ಚರ; 7 ರಾಜ್ಯಗಳ ಸಿಎಂಗಳಿಗೆ ಪ್ರಧಾನಿ ಸಲಹೆ
ಪರೀಕ್ಷೆ, ಶೋಧ ಮತ್ತು ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಪ್ರಧಾನಿ ಸೂಚಿಸಿ ದರು. ಕೆಲವು ಕಡೆಗಳಲ್ಲಿ ಜನರು ಕೋವಿಡ್-19 ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಗ್ಗೆ ಸರಕಾರಗಳು ಅರಿವು ಮೂಡಿಸಬೇಕು. ಕಿರಿಕಿರಿ ಯಾಗುತ್ತಿದ್ದರೂ ಮಾಸ್ಕ್ ಧರಿಸುವುದನ್ನು ಬಿಡಬಾರದು ಎಂದು ಪ್ರಧಾನಿ ಜನರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಉತ್ತರ ಪ್ರದೇಶ, ತಮಿಳುನಾಡು, ದಿಲ್ಲಿ ಮತ್ತು ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಜತೆಗಿನ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ರಾಜ್ಯಗಳೇ ಶೇ. 65ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಹಾಗೆಯೇ ಒಟ್ಟಾರೆ ಸಾವಿನಲ್ಲಿ ಈ ರಾಜ್ಯಗಳ ಪಾಲು ಶೇ.77ರಷ್ಟಿದೆ.