Advertisement

ಮೂರು ತಿಂಗಳಿಂದ ಆ್ಯಂಬುಲೆನ್ಸ್‌ ಸೇವೆ ಇಲ್ಲ

11:34 PM Sep 22, 2020 | mahesh |

ಕೋಟ: ಸಾಸ್ತಾನ ಟೋಲ್‌ಗೇಟ್‌ಗೆ ಸಂಬಂಧಿಸಿದಂತೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ನವಯುಗ ಕಂಪೆನಿ ಮತ್ತೆ-ಮತ್ತೆ ಎಡವುತ್ತಿದ್ದು ಹಲವು ಸಮಸ್ಯೆಗಳು ಸಾರ್ವಜನಿಕ ರನ್ನು ಕಾಡುತ್ತಿವೆ. ಆದರೆ ಇವುಗಳಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಕಂಪೆನಿ ವಿಫಲವಾಗಿವೆ. ಬ್ರಹ್ಮಾವರದಿಂದ-ತೆಕ್ಕಟ್ಟೆ, ಕೋಟೇಶ್ವರ ತನಕ ಬಹುತೇಕ ಬೀದಿ ದೀಪಗಳು ಹಾಳಾಗಿ ಹಲವು ಸಮಯ ಕಳೆದಿದ್ದು ಸಮರ್ಪಕ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಟೋಲ್‌ನ ಆ್ಯಂಬುಲೆನ್ಸ್‌ ದುರಸ್ತಿಗೆ ತೆರಳಿ ಮೂರು ತಿಂಗಳು ಕಳೆದರೂ ರಿಪೇರಿಯಾಗಿಲ್ಲ . ಟೋಲ್‌ನಲ್ಲಿ ಸಿಬಂದಿ ಕೊರತೆ ಇದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.

Advertisement

ಬೀದಿ ದೀಪ ಸಮಸ್ಯೆ
ಬ್ರಹ್ಮಾವರ, ಸಾಸ್ತಾನ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ, ಕೋಟೇಶ್ವರ ಮುಂತಾದ ಕಡೆಗಳಲ್ಲಿ ದಾರಿದೀಪಗಳು ಕೆಟ್ಟು ಹಲವು ತಿಂಗಳು ಕಳೆದಿವೆ. ಸಾಸ್ತಾನ ಟೋಲ್‌ ಗೇಟ್‌ನ ಸುತ್ತಮುತ್ತ ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲ. ಬೀದಿದೀಪವಿಲ್ಲದ ಕತ್ತಲ ವಾತಾವರಣ ಮಳೆಗಾಲದಲ್ಲಿ ಕಳ್ಳತನದಂತಹ ದುಷ್ಕೃತ್ಯಗಳಿಗೆ ಅನುಕೂಲವಾಗ ಬಹುದು. ಪಾದಚಾರಿ, ಸೈಕಲ್‌ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಬೀದಿದೀಪದ ಸಮಸ್ಯೆ ಇದ್ದು ಹಾಳಾದ ದೀಪಗಳನ್ನು ಸರಿಯಾಗಿ ದುರಸ್ತಿ ಮಾಡದೆ ತೇಪೆ ಹಾಕಿ ತಾತ್ಕಾಲಿಕ ದುರಸ್ತಿ ಮಾಡುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚುತ್ತಿದೆ ಎನ್ನುವ ಆರೋಪವಿದೆ.

ಮೂರು ತಿಂಗಳಿನಿಂದ ಆ್ಯಂಬುಲೆನ್ಸ್‌ ಇಲ್ಲ
ಟೋಲ್‌ನ ಆ್ಯಂಬುಲೆನ್ಸ್‌ ಆಗಾಗ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಅದೇ ರೀತಿ ಇದೀಗ ದುರಸ್ತಿಗಾಗಿ ತೆರಳಿದ ಆ್ಯಂಬುಲೆನ್ಸ್‌ ಮೂರು ತಿಂಗಳಾದರೂ ಹಿಂದಿರುಗಿಲ್ಲ. ಟೋಲ್‌ನ ನಿಯಮದ ಪ್ರಕರಣ ತುರ್ತು ಸೇವೆಗಾಗಿ ನಿಯೋಜನೆ ಗೊಂಡ ಯಾವುದೇ ವಾಹನ ಕೆಟ್ಟು ನಿಂತಾಗ ಬದಲಿ ವ್ಯವಸ್ಥೆ ಮಾಡಿ ಜನರಿಗೆ ಸೇವೆ ನೀಡಬೇಕು. ಆದರೆ ಇಲ್ಲಿ ಬದಲಿ ವ್ಯವಸ್ಥೆ ಮಾಡಿಲ್ಲ.ಹೀಗಾಗಿ ಅಪಘಾತಗಳು ನಡೆದಾಗ ಆಸ್ಪತ್ರೆಗೆ ದಾಖಲಿಸಲು 108 ವಾಹನ ಅಥವಾ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ. ಕೊರೊನಾ ಪೀಡಿತ ರನ್ನು ಆಸ್ಪತ್ರೆಗೆ ದಾಖಲಿಸುವ ಕಾರಣದಿಂದ 108 ವಾಹನ ಕೂಡ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಜನರಿಗೆ ಸಾಕಷ್ಟು ಸಮಸ್ಯೆ ಯಾಗುತ್ತಿದೆ. ಇತರ ಸಮಸ್ಯೆಗಳು ಕಾರ್ಮಿಕರ ಕೊರತೆಯಿಂದಾಗಿ ಟೋಲ್‌ ಸಂಗ್ರಹ ಮುಂತಾದ ಕೆಲಸ ಕಾರ್ಯಗಳಿಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಚರಂಡಿ ನಿರ್ವಹಣೆ ಕೂಡ ಸರಿಯಾಗಿ ಗಮನ ನೀಡುತ್ತಿಲ್ಲ, ಹಲವು ಕಡೆ ರಸ್ತೆ ಮೇಲೆ ನೀರು ನಿಲ್ಲುತ್ತದೆ ಎನ್ನುವ ದೂರುಗಳಿವೆ. ಇದರ ಶಾಶ್ವತ ಪರಿಹಾರಕ್ಕೆ ನವಯುಗ ಕಂಪೆನಿ ಒತ್ತು ನೀಡಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಹೆಚ್ಚುವರಿ ಆ್ಯಂಬುಲೆನ್ಸ್‌ಗೆ ಬೇಡಿಕೆ
ಕುಂದಾಪುರದಿಂದ-ಉದ್ಯಾವರ ತನಕದ 40 ಕಿ.ಮೀ. ವ್ಯಾಪ್ತಿಯನ್ನು ಸಾಸ್ತಾನ ಟೋಲ್‌ ಹೊಂದಿದ್ದು, ಈ ಪ್ರದೇಶದಲ್ಲಿ ಯಾವುದೇ ಅಪಘಾತ ವಾದರೆ ಸಾಸ್ತಾನ ಟೋಲ್‌ನವರು ತುರ್ತು ನೆರವಿಗೆ ಧಾವಿಸಬೇಕು. ಆದರೆ ಈ ವ್ಯಾಪ್ತಿಯಲ್ಲಿ ಒಂದೇ ಒಂದು ಆ್ಯಂಬುಲೆನ್ಸ್‌ ಇರುವುದು ಇದೂ ಸಮರ್ಪಕವಾಗಿರದ ಕಾರಣ ಸರಿಯಾದ ಸೇವೆ ಸಿಗುತ್ತಿಲ್ಲ. ಹೀಗಾಗಿ ಕುಂದಾಪುರ, ಬ್ರಹ್ಮಾವರ ಪರಿಸರದಲ್ಲಿ ಹೆಚ್ಚುವರಿ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆ ಇದೆ.

ಕಾರ್ಮಿಕರ ಸಮಸ್ಯೆ
ಆರೋಗ್ಯ ಸಮಸ್ಯೆಯಿಂದ ಹಲವು ಮಂದಿ ಕಾರ್ಮಿಕರು ರಜೆಯಲ್ಲಿದ್ದಾರೆ. ಹೀಗಾಗಿ ಬೀದಿ ದೀಪ ದುರಸ್ತಿಗೆ ಸಮಸ್ಯೆಯಾಗಿದೆ. ಆ್ಯಂಬುಲೆನ್ಸ್‌ ದುರಸ್ತಿಯಲ್ಲಿದ್ದು ಶೀಘ್ರ ಮರಳಲಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಗಂಭೀರವಾಗಿ ಸ್ವೀಕರಿಸಿ ಪರಿಹರಿಸಲಾಗುತ್ತದೆ.
-ಕೇಶವ ಮೂರ್ತಿ, ನವಯುಗ ಟೋಲ್‌ನ, ಮುಖ್ಯ ನಿರ್ವಾಹಕ

Advertisement
Advertisement

Udayavani is now on Telegram. Click here to join our channel and stay updated with the latest news.

Next