Advertisement

ಫಿಫಾ ವಿಶ್ವಕಪ್‌ನಲ್ಲಿ 4 ಬಾರಿಯ ವಿಶ್ವಚಾಂಪಿಯನ್‌ ಇಟಲಿ ತಂಡವೇ ಇಲ್ಲ!

03:25 AM Jun 30, 2018 | |

ದಿನೇ ದಿನೇ ಫಿಫಾ ಕಾಲ್ಚೆಂಡಿನ ಜ್ವರ ಕಾಡ್ಗಿಚ್ಚಿನಂತೆ ಜಗತ್ತಿನ ಎಲ್ಲ ಭಾಗಗಳಿಗೆ ವ್ಯಾಪಿಸುತ್ತಿದೆ. ಟೂರ್ನಿಯಲ್ಲಿರುವ ತಂಡಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ. ಆದರೆ ನಾಲ್ಕು ಬಾರಿಯ ವಿಶ್ವಚಾಂಪಿಯನ್‌ ಇಟಲಿ ತಂಡವೇ ಕಣದಲ್ಲಿಲ್ಲದಿರುವುದು ಅಭಿಮಾನಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. 

Advertisement

ಫಿಫಾ 2018ರ ವಿಶ್ವಕಪ್‌ ಫ‌ುಟ್‌ಬಾಲ್‌ ಟೂರ್ನಿಯ ಅರ್ಹತಾ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿಶ್ವಕಪ್‌ನಲ್ಲಿ ಆಡಲು ಇಟಲಿಗೆ ಸಾಧ್ಯವಾಗಿಲ್ಲ. ನಾಲ್ಕು ಬಾರಿ ವಿಶ್ವಚಾಂಪಿಯನ್‌ ಹಾಗೂ ಎರಡು ಬಾರಿ ರನ್ನರ್‌ ಆಪ್‌ ಆಗಿರುವ ಇಟಲಿ ತಂಡದ ಆಟ ನೋಡಲು ಸಾಧ್ಯವಾಗದಿರುವುದು ಅಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿದೆ. 

ಇಟಲಿ ವಿಶ್ವದ ಬಲಿಷ್ಠ ಫ‌ುಟ್‌ಬಾಲ್‌ ತಂಡಗಳಲ್ಲಿ ಒಂದು. 1930ರಲ್ಲಿ ಆರಂಭವಾದ ಮೊದಲ ಫಿಫಾವಿಶ್ವಕಪ್‌ನಲ್ಲಿ ಇಟಲಿ ಭಾಗಿಯಾಗಿರಲಿಲ್ಲ. 

1934ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದ ಇಟಲಿ ತಂಡವು ಪಾದಾರ್ಪಣೆ ಟೂರ್ನಿಯಲ್ಲಿಯೇ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಅನಂತರದಲ್ಲಿ 1958ರಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಅದಾದ ಸುದೀರ್ಘ‌ 6 ದಶಕಗಳ ನಂತರ ಮತ್ತೆ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಇಟಲಿ ವಿಫ‌ಲವಾಗಿದೆ.

ಕಳೆದ ವರ್ಷ ನಡೆದ ಅರ್ಹತಾ ಪಂದ್ಯಗಳಲ್ಲಿ ಸ್ವೀಡನ್‌ ವಿರುದ್ಧ 1-0 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಾಗ ಇಟಲಿಯ ಅಭಿಯಾನಗಳಿಗೆ ಸಿಡಿಲು ಬಡಿದಂತಹ ಅನುಭವವಾಗಿತ್ತು. ಇಂದಿಗೂ ಇಟಲಿ ತಂಡದ ಅಭಿಮಾನಿಗಳಿಗೆ ವಿಶ್ವಕಪ್‌ಗೆ ಆಯ್ಕೆಯಾಗಿಲ್ಲ ಎಂಬ ವಿಷಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಇದೇ ಬೇಸರದಿಂದ ಅನೇಕ ಹಿರಿಯ ಆಟಗಾರರು ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯವನ್ನು ಘೋಷಿಸಿದ್ದಾರೆ. ಇಟಲಿ ಮಾದರಿಯಲ್ಲಿಯೇ ಯುನೈಟೆಡ್‌ ಸ್ಟೇಟ್ಸ್‌ ಆಫ್ ಅಮೆರಿಕಾ, ಚಿಲಿ, ಹಾಲೆಂಡ್‌ ಹಾಗೂ ಕ್ಯಾಮೆರಾನ್‌ನಂತಹ ಪ್ರಬಲ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಆಡದಿರುವುದು ಆಯಾ ತಂಡಗಳ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. 

Advertisement

ಚೀಸ್‌ ಇಲ್ಲದ ಪಿಜ್ಜಾ: ಪ್ರಸಕ್ತ ಫಿಫಾ ಫ‌ುಟ್‌ಬಾಲ್‌ ವಿಶ್ವಕಪ್‌ ಟೂರ್ನಿ 2018ರಲ್ಲಿ ಇಟಲಿ ತಂಡ ಆಡದಿರುವುದು ಚೀಸ್‌ ಇಲ್ಲದಂತಹ ಪಿಜ್ಜಾ ತಿಂದಂತೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ಇಟಲಿಯಿಲ್ಲದ ವಿಶ್ವಕಪ್‌ ವೀಕ್ಷಿಸಲು ಇಟಲಿಯ ಹೆಚ್ಚಿನ ನಿರಾಸಕ್ತಿ ತೋರಿರುವುದು ವರದಿಯಾಗಿದೆ. 

ಕ್ರಿಕೆಟ್‌ನಂತಲ್ಲ ಫ‌ುಟ್‌ಬಾಲ್‌: ಕ್ರಿಕೆಟ್‌ ವಿಶ್ವಕಪ್‌ಗೆ ಐಸಿಸಿ ಹೊರಡಿಸುವ ಶ್ರೇಯಾಂಕ ಪಟ್ಟಿಯಲ್ಲಿ 1ರಿಂದ 9ನೇ ಸ್ಥಾನ ಪಡೆಯುವಂತಹ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತವೆ. ಉಳಿದ ಸ್ಥಾನಗಳಿಗೆ ತಂಡಗಳು ಅರ್ಹತಾ ಪಂದ್ಯಗಳಲ್ಲಿ ಪೈಪೋಟಿ ನಡೆಸಬೇಕಾಗುತ್ತದೆ. ಆದರೆ, ಫ‌ುಟ್‌ಬಾಲ್‌ ಕ್ರೀಡೆ ಕ್ರಿಕೆಟ್‌ನಂತಲ್ಲ. ಆತಿಥ್ಯ ವಹಿಸಿಕೊಳ್ಳುವ ತಂಡವನ್ನು ಹೊರತುಪಡಿಸಿ, ಉಳಿದೆಲ್ಲ ತಂಡಗಳು ಅರ್ಹತಾ ಪಂದ್ಯಗಳಲ್ಲಿ ಸೆಣಸಿ ಅರ್ಹತೆ ಪಡೆಯಬೇಕಾಗುತ್ತದೆ. 

ಅರ್ಹತಾ ಸುತ್ತಿನ ಪ್ರಕ್ರಿಯೆ ನಡೆಯುವುದೇಗೆ? 
ಪ್ರತಿ ವಿಶ್ವಕಪ್‌ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್‌ಗೆ ತಯಾರಿ ಆರಂಭವಾಗುತ್ತದೆ. ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳು 1934ರ ವಿಶ್ವಕಪ್‌ ನಂತರ ಶುರುವಾದವು. ಅಲ್ಲಿಂದ ಇಲ್ಲಿಯವರೆಗೆ ಅದೇ ಮಾದರಿಯನ್ನು ಉಳಿಸಿಕೊಳ್ಳಲಾಗಿದೆ. ಆಫ್ರಿಕಾ, ಏಷ್ಯಾ, ಉತ್ತರ ಮತ್ತು ಮಧ್ಯ ಅಮೆರಿಕ, ಕೆರೆಬಿಯನ್‌, ದಕ್ಷಿಣ ಅಮೆರಿಕ, ಓಸಿಯಾನಿಯ ಮತ್ತು ಯೂರೋಪ್‌ ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. ಅರ್ಹತಾ ಸುತ್ತಿನ ಪಂದ್ಯಗಳು ಮುಗಿಯಲು ಕನಿಷ್ಠವೆಂದರೂ ಮೂರು ವರ್ಷಗಳು ಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು 211 ದೇಶಗಳು ಸ್ಪರ್ಧಿಸಿದ್ದು, ಅಂತಿಮವಾಗಿ 32 ದೇಶಗಳು ಕಣದಲ್ಲಿವೆ. 

ತಂಡಗಳ ವಿಂಗಡಣೆ ಹೇಗೆ?
ವಿಶ್ವಕಪ್‌ನ ಎಂಟು ವಿಭಾಗಗಳಲ್ಲಿ ನಾಲ್ಕು ತಂಡಗಳಿರುತ್ತವೆ. ಪ್ರತಿ ಗುಂಪಿನಲ್ಲಿ ಒಂದು ಉತ್ತಮ ಶ್ರೇಯಾಂಕದ ತಂಡವಿರುತ್ತದೆ. ಹೀಗಾಗಿ, ಏಷ್ಯಾ ಖಂಡದ ಎರಡು ತಂಡಗಳು ಒಂದೇ ಗುಂಪಿನಲ್ಲಿರುವುದಿಲ್ಲ. ಯೂರೋಪಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಗಳಿಸಿರುವುದರಿಂದ ಪ್ರತಿ ಗುಂಪಿನಲ್ಲಿ 2 ತಂಡಗಳು ಇರಲಿವೆ.

ಭಾರತ ಏಕೆ ಅರ್ಹತೆ ಪಡೆಯಲಿಲ್ಲ? 
ಜನವರಿ 2015ರಲ್ಲಿ ಫಿಫಾ ಶ್ರೇಯಾಂಕದಂತೆ ಭಾರತ ಉತ್ತಮ ಸ್ಥಾನ ಹೊಂದಿರಲಿಲ್ಲ. ಏಷ್ಯಾದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾದಾಗ ನೇಪಾಳ ವಿರುದ್ಧ 2-0ರ ಜಯದೊಂದಿಗೆ ಶುಭಾರಂಭ ಮಾಡಿತ್ತು. ಆದರೆ, ನಂತರ ಇರಾನ್‌, ಓಮನ್‌, ತುರ್ಕೆಮೆನಿಸ್ತಾನ್‌ ಹಾಗೂ ಗುವಾಮ… ತಂಡಗಳ ವಿರುದ್ಧ ನಿರಾಶಾದಾಯಕ ಪ್ರದರ್ಶನ ನೀಡಿತು. 8 ಪಂದ್ಯಗಳಲ್ಲಿ 7 ಪಂದ್ಯ ಸೋತು, ಗುಂಪಿನಲ್ಲಿ ಕೊನೆ ಸ್ಥಾನದಲ್ಲಿ ಉಳಿಯಿತು. ಪರಿಣಾಮ ಭಾರತ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫ‌ಲವಾಯಿತು. 

-ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next