Advertisement

ಕ್ರೀಡಾಲೋಕದಲ್ಲಿ ಕೋವಿಡ್ 19 ಸೋಂಕಿನ ಅಟ್ಟಹಾಸ ; ಟೆನಿಸಿಗ ಜೊಕೋವಿಕ್‌ಗೆ ಪಾಸಿಟಿವ್‌

02:11 AM Jun 24, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಅಟ್ಟಹಾಸದ ನಡುವೆ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿರುವ ಬೆನ್ನಲ್ಲೇ ಆಟಗಾರರೇ ಕೋವಿಡ್ 19 ಸೋಂಕಿಗೆ ಒಳಗಾಗುತ್ತಿರುವ ಆಘಾತಕಾರಿ ಸುದ್ದಿಗಳು ಒಂದೊಂದಾಗಿ ಪ್ರಕಟವಾಗುತ್ತಿವೆ.

Advertisement

ಮಂಗಳವಾರ ಈ ಸಾಲಿಗೆ ಬಹಳಷ್ಟು ಕ್ರೀಡಾಪಟುಗಳು ಸೇರ್ಪಡೆಗೊಂಡಿದ್ದು, ಕ್ರೀಡಾ ಲೋಕದಲ್ಲಿ ಆತಂಕ ಮನೆ ಮಾಡಿದೆ.

ನಂ. 1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಅವರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ತಾನೇ ಆಯೋಜಿಸಿದ ಆ್ಯಡ್ರಿಯಾ ಟೂರ್‌ ಸೌಹಾರ್ದ ಟೆನಿಸ್‌ ಕೂಟದ ವೇಳೆ ಜೊಕೋವಿಕ್‌ ಅವರಿಗೆ ಕೋವಿಡ್ 19 ಸೋಂಕು ಅಂಟಿಕೊಂಡದ್ದು ವಿಪರ್ಯಾಸ.

ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ನಾಲ್ವರಲ್ಲಿ ಪಾಸಿಟಿವ್‌ ಕಂಡುಬಂದಂತಾಯಿತು. ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ಗೆ ಕೋವಿಡ್ 19 ಸೋಂಕು ತಗುಲಿದ ಬೆನ್ನಲ್ಲೇ ಕ್ರೊವೇಶಿಯಾದ ಬೋರ್ನ ಕೊರಿಕ್‌ಗೂ ವೈರಸ್‌ ತಾಗಿತ್ತು. ಮಂಗಳವಾರ ಸರ್ಬಿಯಾದ ವಿಕ್ಟರ್‌ ಟ್ರಾಯ್ಕಿ ಅವರಿಗೂ ಕೋವಿಡ್ 19 ಅಂಟಿಕೊಂಡಿತು.

ಜೊಕೋ ವಿರುದ್ಧ ಆಕ್ರೋಶ
ವರದಿ ಹೊರಬೀಳುತ್ತಲೇ ಕೂಟ ಆಯೋಜಿಸಿದ ಜೊಕೋವಿಕ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ 19 ಸೋಂಕು ತಡೆಗಾಗಿ ಸರ್ಬಿಯಾ ಹಾಗೂ ಕ್ರೊವೇಶಿಯಾ ಸರಕಾರಗಳ ಮಾರ್ಗಸೂಚಿಗಳನ್ನು ಸಂಘಟಕರು ಸರಿಯಾಗಿ ಪಾಲಿಸಿರಲಿಲ್ಲ.

Advertisement

ಸಾಮಾಜಿಕ ಅಂತರವನ್ನು ಮರೆತು ಪರಸ್ಪರ ಅಪ್ಪಿಕೊಳ್ಳುವುದು ಹಾಗೂ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದರು ಇದರಿಂದ ಸೋಂಕು ಹರಡಿದಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅಷ್ಟರಲ್ಲಿ ಸ್ವತಃ ಜೊಕೋವಿಕ್‌ ಅವರೇ ಕೋವಿಡ್ 19 ಸೋಂಕಿತರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

‘ಫೈನಲ್‌ ಪಂದ್ಯ ರದ್ದುಗೊಂಡ ಬಳಿಕ ನಾನು ಬೆಲ್ಗ್ರೇಡ್‌ಗೆ ಬಂದು ಪರೀಕ್ಷಿಸಿಕೊಂಡಾಗ ಪಾಸಿಟಿವ್‌ ಫಲಿತಾಂಶ ಬಂದಿದೆ. ಪತ್ನಿ ಜೆಲೆನಾ ಕೂಡ ಈ ಸಾಲಿಗೆ ಸೇರಿದ್ದಾಳೆ. ಆದರೆ ಮಕ್ಕಳ ಫಲಿತಾಂಶ ನೆಗೆಟಿವ್‌ ಆಗಿದೆ’ ಎಂದು ಜೊಕೋ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟಿಗೂ ಕೋವಿಡ್ ಆಘಾತ
ದಕ್ಷಿಣ ಆಫ್ರಿಕಾದಲ್ಲಿ 100 ಕ್ರಿಕೆಟಿಗರು ಹಾಗೂ ಅಧಿಕಾರಿಗಳನ್ನು ಪರೀಕ್ಷಿಸಿದಾಗ ಅವರಲ್ಲಿ 7 ಮಂದಿಗೆ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ ಎಂದು “ಕ್ರಿಕೆಟ್‌ ಸೌತ್‌ ಆಫ್ರಿಕಾ’ ತಿಳಿಸಿದೆ. ದೇಶದಾದ್ಯಂತ ಇರುವ ಕ್ರಿಕೆಟ್‌ ಸಂಸ್ಥೆಗಳ ಸಿಬಂದಿ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವೃತ್ತಿಪರ ಕ್ರಿಕೆಟಿಗರನ್ನು ತಪಾಸಣೆಗೆ ಒಳಪಡಿಸಲಾಗಿತ್ತು.

ಪಾಕ್‌ ಕ್ರಿಕೆಟಿಗರಿಗೆ ಆಘಾತ
ಇಂಗ್ಲೆಂಡ್‌ ಪ್ರವಾಸಕ್ಕಾಗಿ ಪಾಕಿಸ್ಥಾನ ಕ್ರಿಕೆಟ್‌ ತಂಡ ಸಜ್ಜಾಗುತ್ತಿದ್ದು ಪಾಕ್‌ ಕ್ರಿಕೆಟಿಗರೆಲ್ಲ ಸೋಮವಾರ ರಾವಲ್ಪಿಂಡಿಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ ಹತ್ತು ಮಂದಿಗೆ ಸೋಂಕು ತಗುಲಿದೆ.

ಶಾದಾಬ್‌ ಖಾನ್‌, ಹ್ಯಾರಿಸ್‌ ರೌಫ್, ಹೈದರ್‌ ಅಲಿ, ಫ‌ಕಾರ್‌ ಜಮಾನ್‌, ಇಮ್ರಾನ್‌ ಖಾನ್‌, ಕಾಶಿಫ್ ಭಾಟ್ಟಿ, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಹಸ್ನೆ„ನ್‌, ಮೊಹಮ್ಮದ್‌ ರಿಜ್ವಾನ್‌ ಹಾಗೂ ವಾಹೆಬ್‌ ರಿಯಾಜ್‌ಗೆ ಸೋಂಕು ತಗುಲಿರುವುದನ್ನು ಪಿಸಿಬಿ (ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ) ಖಚಿತಪಡಿಸಿದೆ. ಇದರೊಂದಿಗೆ ಪಾಕಿಸ್ಥಾನ ತಂಡದ ಇಂಗ್ಲೆಂಡ್‌ ಪ್ರವಾಸ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆತಿಥೇಯ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಹಾಗೂ ಅಷ್ಟೇ ಸಂಖ್ಯೆಯ ಟಿ20 ಸರಣಿಗಾಗಿ ಜೂ.28ರಂದು ವಿಶೇಷ ವಿಮಾನದಲ್ಲಿ ಲಾಹೋರ್‌ನಿಂದ ಮ್ಯಾಂಚೆಸ್ಟರ್‌ಗೆ ಪಾಕ್‌ ತಂಡ ಪ್ರಯಾಣ ಬೆಳೆಸಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next