Advertisement

ಎನ್‌ಎಂಪಿಟಿ ಮೇಲ್ದರ್ಜೆಗೆ ಯೋಜನೆ 

01:11 PM Oct 26, 2017 | |

ಮಹಾನಗರ: ದೇಶದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಎಲ್‌.ಪಿ.ಜಿ.ಯನ್ನು ನಿರ್ವಹಿಸುತ್ತಿರುವ ಪ್ರತಿಷ್ಠಿತ ನವ ಮಂಗಳೂರು ಬಂದರನ್ನು ಸರ್ವ ರೀತಿಯಲ್ಲಿ ಆಧುನೀಕರ ಣಗೊಳಿಸಲು ಕೇಂದ್ರ ಬಂದರು ಇಲಾಖೆ ಮುಂದಾಗಿದೆ. ಇಲ್ಲಿ ಆಧುನೀಕೃತ ಸವಲತ್ತುಗಳನ್ನು ಕಲ್ಪಿಸುವ ಹೊಸ ಕಾರ್ಯಯೋಜನೆಗಳ ನೀಲ ನಕ್ಷೆ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯಲಿದೆ.

Advertisement

‘ನವಮಂಗಳೂರು ಸಹಿತ ದೇಶದ 12 ಪ್ರಮುಖ ಬಂದರುಗಳನ್ನು 90 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸುವ ಸಂಬಂಧ ನೀಲನಕ್ಷೆಯನ್ನು ಅಂತಿಮಗೊಳಿಸಲಾಗಿದೆ’ ಎಂದು ಕೇಂದ್ರ ಬಂದರು ಸಚಿವ ನಿತಿನ್‌ ಗಡ್ಕರಿ ಅವರು ಅ. 22ರಂದು ಹೊಸದಿಲ್ಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆಧುನೀಕರಣಗೊಳಿಸುವ ಹಂತ ಮಂಗಳೂರಿನಲ್ಲಿ ಚಾಲನೆಗೊಂಡಿದ್ದು, 2ನೇ ಹಂತದಲ್ಲಿ ಯಾವೆಲ್ಲ ಯೋಜನೆಗಳು ಸೇರಿಕೊಂಡಿವೆ ಎಂಬುದರ ಬಗ್ಗೆ ಇನ್ನಷ್ಟೇ ವಿವರಗಳು ದೊರೆಯಬೇಕಿವೆ.

ನವಮಂಗಳೂರು ಬಂದರನ್ನು ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಇಲ್ಲಿ ನಡೆಯುತ್ತಿವೆ. ಬಂದರಿನಲ್ಲಿ ಈಗಿರುವ ಬರ್ತ್‌ (ಹಡಗು ತಂಗುವ ಸ್ಥಳ) 15ನ್ನು ಯುಪಿಸಿಎಲ್‌ ವತಿಯಿಂದ ಸುಸಜ್ಜಿತ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇಲ್ಲಿನ ಬರ್ತ್‌ನಲ್ಲಿ ನಿಲ್ಲುವ ಹಡಗಿನಿಂದ ಕಲ್ಲಿದ್ದಲನ್ನು ಯಾಂತ್ರೀಕೃತ ರೀತಿಯಲ್ಲಿಯೇ ನಿರ್ವಹಿಸುವ ಕಾರ್ಯ ಶುರುವಾಗಿದೆ. ಹೊಸದಾಗಿ, ಜನರಲ್‌ ಪಬ್ಲಿಕ್‌ ಕೋಲ್‌ ಹ್ಯಾಂಡ್ಲಿಂಗ್‌ ಸಲುವಾಗಿ ಬರ್ತ್‌ 18ರ ನಿರ್ಮಾಣ ಇಲ್ಲಿ ನಡೆಯುತ್ತಿದೆ. ಮೆಕಾನಿಸಂ ರೀತಿಯಲ್ಲಿ ಆಧುನೀಕರಿಸುವ ಕೆಲಸವನ್ನು ಚೆಟ್ಟಿನಾಡ್‌ ಸಿಮೆಂಟ್‌ನವರು ನಿರ್ವಹಿಸುತ್ತಿದ್ದಾರೆ. ಇದರ ಜತೆಗೆ ಬರ್ತ್‌ 14ರಲ್ಲಿ ಕಂಟೈನರ್‌ ಹ್ಯಾಂಡ್ಲಿಂಗ್‌ ಮೆಕ್ಯಾನೈಸ್‌ ಮಾಡುವ ಕೆಲಸ ಈಗ ಚಾಲನೆ ಪಡೆದಿದೆ.

ಸುಸಜ್ಜಿತ ಬಂದರು
ಸುಮಾರು 150.40 ಮೀ. ಆಳ ಹೊಂದಿರುವ ನವ ಬಂದರು ಪ್ರವೇಶದಲ್ಲಿ ಕಾಲುವೆ ಇದೆ. ಸಿಮೆಂಟ್‌ ರವಾನೆ ಕೇಂದ್ರವನ್ನು ಹೊಂದಿರುವ ಮೊದಲ ಬಂದರು ಇದು. ಕಬ್ಬಿಣದ ಅದಿರು, ಪೆಟ್ರೋಲಿಯಂ ಉತ್ಪನ್ನ, ರಾಸಾಯನಿಕ ದ್ರವಗಳ ವಹಿವಾಟನ್ನು ದೊಡ್ಡ ಪ್ರಮಾಣದಲ್ಲಿ ನಿರ್ವಹಿಸುತ್ತಿದೆ. ವಿದೇಶೀ ಪ್ರವಾಸಿಗರನ್ನು ನಿರಂತರವಾಗಿ ಅಮೆರಿಕ, ಜರ್ಮನಿ ಮುಂತಾದೆಡೆಗಳಿಂದ ನಾಲ್ಕಾರು ನೌಕೆಗಳು ನವ ಮಂಗಳೂರು ಬಂದರಿಗೆ ಕರೆತರುತ್ತವೆ. ಒಳನಾಡಿನಲ್ಲಿ ಪ್ರವಾಸ ಕೈಗೊಂಡು ಅವರೆಲ್ಲ ಮತ್ತೆ ಸಮುದ್ರ ಮಾರ್ಗವಾಗಿಯೇ ಸ್ವದೇಶಕ್ಕೆ ಮರಳುತ್ತಾರೆ.

ಕಾರ್ಖಾನೆಗಳ ಜತೆಗೆ ಅನ್ಯೋನ್ಯ ನಂಟು
ಮಂಗಳೂರು ಬಂದರಿನ ಹಿನ್ನಾಡು ಪ್ರದೇಶವು ಕಬ್ಬಿಣ ಹಾಗೂ ಮ್ಯಾಂಗನೀಸ್‌ ಮುಂತಾದ ಖನಿಜ ಸಂಪತ್ತಿನಿಂದ ಸಮೃದ್ಧವಾಗಿದ್ದು, ಕುದುರೆಮುಖದಲ್ಲೂ ಕಬ್ಬಿಣದ ಅದಿರಿನ ಸಮೃದ್ಧ ನಿಕ್ಷೇಪಗಳಿವೆ. ಅದರ ರವಾನೆಗಿದ್ದ ಏಕೈಕ ನೈಸರ್ಗಿಕ ಹೊರಕಿಂಡಿ ಮಂಗಳೂರು ಬಂದರಾಗಿತ್ತು. ಸಂಪದ್ಭರಿತ ಅರಣ್ಯ, ಭದ್ರಾವತಿಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗಳು ಮಂಗಳೂರು ಹಿನ್ನಾಡಿನ ವ್ಯಾಪ್ತಿಯಲ್ಲಿದ್ದು, ಕಾಫಿ ಹಾಗೂ ಗೋಡಂಬಿ ನೆಡುತೋಪು, ಸಕ್ಕರೆ, ಕಾಗದ, ಸಿಮೆಂಟ್‌, ಮಂಗಳೂರು ಹೆಂಚು, ಸೂಪರ್‌ ಫಾಸ್ಪೇಟ್‌, ರಸ ಗೊಬ್ಬರ ತಯಾರಿಕೆ ಕಾರ್ಖಾನೆಗಳು ಮಂಗಳೂರಿನಲ್ಲಿವೆ.

Advertisement

ಪಶ್ಚಿಮ ಕರಾವಳಿಯಲ್ಲಿ 14 ಮೀಟರ್‌ ಆಳವಿರುವ ಒಳಬಂದರು ಎಂಬ ಮಾನ್ಯತೆ ಪಡೆದ ನವ ಮಂಗಳೂರು ಬಂದರು ಪ್ರಮುಖ ವಿದೇಶೀ ಸಮುದ್ರ ಮಾರ್ಗಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದೆ. ದಕ್ಷಿಣ ರೈಲ್ವೇ, ನೈಋತ್ಯ ಹಾಗೂ ಕೊಂಕಣ ರೈಲ್ವೇ ವಲಯಗಳನ್ನು ಮತ್ತು ಮೂರು ರಾ.ಹೆ.ಗಳನ್ನು ಬೆಸೆಯುವ ಸಂಪರ್ಕ ವ್ಯವಸ್ಥೆಯಿದೆ.ವಿಶೇಷವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕವನ್ನೂ ಹೊಂದಿದೆ.

ತೈಲೋತ್ಪನ್ನ, ಕಾಫಿ, ಗೋಡಂಬಿ ವಹಿವಾಟು
2013-14ನೇ ಸಾಲಿನಲ್ಲಿ 39.36 ಮಿಲಿಯ ಟನ್‌ಗಳನ್ನು ನಿರ್ವಹಿಸಿದ ದಾಖಲೆ ಈ ಬಂದರಿನದ್ದಾಗಿದೆ. ತೈಲೋತ್ಪನ್ನಗಳು, ಗ್ರಾನೈಟ್‌, ಆಹಾರ ಧಾನ್ಯ, ಕಬ್ಬಿಣದ ಅದಿರಿನ ಉಂಡೆಗಳು, ಕಂಟೈನರ್‌ ಉಳ್ಳ ಕಾರ್ಗೋಗಳು ಇಲ್ಲಿಂದ ರಫ್ತುಗೊಂಡಿವೆ. 

ಎಂಆರ್‌ಪಿಎಲ್‌ಗಾಗಿ ಕಚ್ಚಾತೈಲ, ಮರದ ದಿಮ್ಮಿಗಳು, ಕಾರ್ಗೊ ಪಾರ್ಸೆಲ್‌ ಗಳು, ಘನೀಕೃತ ಪುಡಿಗಳು, ಸಿಮೆಂಟ್‌, ಕಲ್ಲಿದ್ದಲು, ರಸಗೊಬ್ಬರ, ಅಡುಗೆ ಎಣ್ಣೆ, ರಾಸಾಯನಿಕಗಳು ಪ್ರಮುಖ ರಫ್ತುಗಳು. ಕಬ್ಬಿಣ ಅದಿರಿನ ಉಂಡೆಗಳು, ಗ್ರಾನೈಟ್‌, ಮೈದಾ, ತೈಲೋತ್ಪನ್ನಗಳು, ಕಾಫಿ, ಸಂಸ್ಕರಿತ ಗೋಡಂಬಿ ಆಮದಾಗುತ್ತಿವೆ. ಎಂಆರ್‌ಪಿಎಲ್‌, ಒಎನ್‌ಜಿಸಿ, ಕೆಐಒಸಿಎಲ್‌, ಇಎಲ್‌ಎಫ್‌, ಕಿಸ್ಕೋ, ಎಂಸಿಎಫ್‌, ಎಚ್‌ಪಿಸಿಎಲ್‌, ಐಒಸಿ, ಯುಪಿಸಿಎಲ್‌ ಮುಂತಾದ ಮೆಗಾ ಉದ್ಯಮಗಳಿಗೆ ಕಾರ್ಗೊ ನಿರ್ವಹಣೆಗಾಗಿ ಎಲ್ಲ ರೀತಿಯ ಸವಲತ್ತುಗಳನ್ನು ಬಂದರು ಪೂರೈಸುತ್ತಿದೆ.

‘ಅಭಿವೃದ್ಧಿಯ ಆಶಾಭಾವ’
ನವಮಂಗಳೂರು ಸಹಿತ ದೇಶದ 12 ಪ್ರಮುಖ ಬಂದರುಗಳನ್ನು 90 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸುವ ಸಂಬಂಧ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಇದರನ್ವಯ ಮಂಗಳೂರು ಬಂದರು ಕೂಡ ಅತ್ಯಂತ ಶ್ರೇಷ್ಠ ನೆಲೆಯಲ್ಲಿ ಮೇಲ್ದರ್ಜೆಗೆ ಏರುವ ನಿರೀಕ್ಷೆ ಇರಿಸಲಾಗಿದೆ. ಇಲ್ಲಿ ಆಧುನೀಕರಣ ವ್ಯವಸ್ಥೆಗಳು ಜಾರಿಯಲ್ಲಿದ್ದು, ಇನ್ನಷ್ಟು ಅಭಿವೃದ್ಧಿಯ ಆಶಾಭಾವ ಇದೆ.
ಬಿ. ಸದಾಶಿವ ಶೆಟ್ಟಿಗಾರ್‌,
ಟ್ರಸ್ಟಿ, ನವಮಂಗಳೂರು ಬಂದರು

1975ರಲ್ಲಿ ಆರಂಭ
ಗುರುಪುರ ಹಾಗೂ ನೇತ್ರಾವತಿ ನದಿಗಳ ಸಂಗಮ ಸ್ಥಾನವಾದ ಹಳೆ ಬಂದರಿಗೆ ಮಂಗಳೂರಿನ ಸಾಗರ ವ್ಯಾಪಾರ ವಹಿವಾಟಿನ ಆಧುನಿಕ ಕಾಲಘಟ್ಟದ ಏರುತ್ತಿರುವ ಬೇಡಿಕೆಗಳನ್ನು ನಿಭಾಯಿಸುವಲ್ಲಿ ತನ್ನದೇ ಆದ ಮಿತಿಗಳಿದ್ದವು. ಹೀಗಾಗಿ ಸುಸಜ್ಜಿತ ನೂತನ ಬಂದರಿನ ಆವಶ್ಯಕತೆ ತಲೆದೋರಿ ನವಮಂಗಳೂರು ಬಂದರು ಉದಯಕ್ಕೆ ಕಾರಣವಾಯಿತು. ದಿ| ಉಳ್ಳಾಲ ಶ್ರೀನಿವಾಸ ಮಲ್ಯರ ನಿರಂತರ ಪ್ರಯತ್ನದ ಫಲವಾಗಿ ಬಂದರು ನಿರ್ಮಾಣಗೊಂಡಿತು. 1974 ಮೇ 4ರಂದು ಕಾರ್ಯಾರಂಭ ಮಾಡಿತಾದರೂ, 1975 ಜ. 11ರಂದು ಪ್ರಧಾನಿಯವರು ಔಪಚಾರಿಕವಾಗಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. 1980ರಿಂದ ಬಂದರು ಟ್ರಸ್ಟ್‌ ಸಮಿತಿ ರಚನೆಯ ಬಳಿಕ ಗಣನೀಯ ಪ್ರಮಾಣದಲ್ಲಿ ನವಮಂಗಳೂರು ಬಂದರು ಅಭಿವೃದ್ಧಿಗೊಂಡಿತು. 

‘ಭಾರತ್‌ ಮಾಲಾ’; ಆರ್ಥಿಕ ಕಾರಿಡಾರ್‌ಗೆ ಅನುಮೋದನೆ
ಭಾರತ್‌ಮಾಲಾ ಯೋಜನೆಯನ್ನು ಪರಿಚಯಿಸುವ ಮುಖೇನ ಬಂದರಿಗೆ ಜಾಗತಿಕ ಮಾನ್ಯತೆಯ ರಸ್ತೆ ಸಂಪರ್ಕ ಒದಗಿಸುವ ಯೋಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಆರ್ಥಿಕ ಕಾರಿಡಾರ್‌ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next