Advertisement

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

11:50 PM Jun 15, 2024 | Team Udayavani |

ಮಂಗಳೂರು: ಮುಂಗಾರು ಅಬ್ಬರಿಸುವ ಕಾಲಕ್ಕೆ ಕಡಲಿನಲ್ಲಿ ನಾಡದೋಣಿ ಮೀನುಗಾರಿಕೆ ಮಾಡುವವರು ತುರ್ತಾಗಿ ದಡ ಸೇರುವ ಸಂದರ್ಭ ಇದ್ದರೆ ಅವರಿಗೆ ಅನುಕೂಲ ಕಲ್ಪಿಸಲು ನವ ಮಂಗಳೂರು ಬಂದರಿನಲ್ಲಿ (ಎನ್‌ಎಂಪಿಎ) ಹೊಸದಾಗಿ “ಶೆಲ್ಟರ್‌’ ನಿರ್ಮಿಸಲು ನಿರ್ಧರಿಸಲಾಗಿದೆ.

Advertisement

ಯಾಂತ್ರಿಕೃತ ಮೀನುಗಾರಿಕೆ ಈಗಾಗಲೇ (ಮೇ 31) ಸ್ಥಗಿತಗೊಂಡ ಬೆನ್ನಿಗೆ ನಾಡದೋಣಿ ಮೀನುಗಾರಿಕೆ ಆರಂಭವಾಗುತ್ತದೆ. ಸದ್ಯ “ತೂಫಾನ್‌’ ಇನ್ನೂ ಬಾರದಿರುವ ಕಾರಣದಿಂದ ಪೂರ್ಣಮಟ್ಟದಲ್ಲಿ ನಾಡದೋಣಿ ಸಂಚಾರಕ್ಕೆ ಕೊಂಚ ದಿನ ಕಾಯಬೇಕಾಗಬಹುದು.

ಸದ್ಯ ಬೆರಳೆಣಿಕೆ ನಾಡದೋಣಿಗಳು ಹಳೆಬಂದರಿನ ಮೂಲಕ ಅಥವಾ ಬೀಚ್‌ ಸಮೀಪದಿಂದ ಮೀನುಗಾರಿಕೆಗೆ ತೆರಳುತ್ತವೆ. ಆದರೆ, ಕಡಲು ಪ್ರಕ್ಷುಬ್ದವಾದ ಬಳಿಕ ಎನ್‌ಎಂಪಿಎ ವ್ಯಾಪ್ತಿಗೆ ಬಂದು ಪಾಸ್‌ ಪಡೆದು ಅಲ್ಲಿಂದಲೇ ಮೀನುಗಾರಿಕೆ ನಡೆಸಬೇಕಾಗುತ್ತದೆ.

ಎನ್‌ಎಂಪಿಗೆ ಬರುವ ಮೀನುಗಾರರಿಗೆ ಸದ್ಯ ತಂಗಲು ಸಮುದ್ರ ದಂಡೆ ಮಾತ್ರ ಇದೆ. ಮಳೆ-ಗಾಳಿ ಇರುವಾಗ ಇಲ್ಲಿ ಶೆಲ್ಟರ್‌ ವ್ಯವಸ್ಥೆ ಇಲ್ಲದೆ ಮೀನುಗಾರರು ಸಮಸ್ಯೆ ಎದುರಿಸುತ್ತಾರೆ. ಈ ಕಾರಣದಿಂದ ಹೊಸದಾಗಿ “ಶೆಲ್ಟರ್‌’ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಎಲ್ಲಿ “ಶೆಲ್ಟರ್‌’?
ಘಿಎನ್‌ಎಂಪಿಎಯಲ್ಲಿರುವ ಬರ್ತ್‌ ನಂ. 1ರಲ್ಲಿ ಖಾಲಿ ಜಾಗವಿದೆ. ಅದನ್ನು ಹಿಂದಿನಿಂದಲೂ ಹಾಗೆಯೇ ಬಿಡಲಾಗಿದೆ. ಇದನ್ನು “ಸ್ಪೆಂಡಿಂಗ್‌ ಬೀಚ್‌’ ಎನ್ನಲಾಗುತ್ತಿದೆ. ಇಲ್ಲಿ ಮುಂದಿನ 3 ತಿಂಗಳ ಒಳಗೆ ಹೊಸ ಶೆಲ್ಟರ್‌ ನಿರ್ಮಾಣವಾಗಲಿದೆ. ಈ ಮಧ್ಯೆ ತತ್‌ಕ್ಷಣಕ್ಕೆ ಮೀನುಗಾರರ ನೆರವಿಗೆ ಹೊಸದಾಗಿ ತಾತ್ಕಾಲಿಕವಾಗಿ “ಶೆಡ್‌’ ಕೂಡ ಈಗ ನಿರ್ಮಾಣ ಮಾಡಲಾಗುತ್ತಿದೆ. ಬಸ್‌ ನಿಲ್ದಾಣದ ರೂಪದಲ್ಲಿ ತತ್‌ಕ್ಷಣಕ್ಕೆ ಬಳಕೆಗೆ ಸಿಗುವಂತಾಗುವುದು ಇದರ ಉದ್ದೇಶ.

Advertisement

ಪಾಸ್‌ ಮೂಲಕ ಪ್ರವೇಶ
ನಾಡದೋಣಿ ಮೀನುಗಾರಿಕೆ ಸಮುದ್ರದಲ್ಲಿ ಸುಮಾರು 20 ಕಿ.ಮೀ.ನ ಒಳಗಡೆ ಮಾತ್ರ ಅವಕಾಶ. ಆದರೆ, ಸಮುದ್ರ ಪ್ರಕ್ಷುಬ್ದವಾಗಿರುವ ಕಾಲಕ್ಕೆ 10 ಕಿ.ಮೀ.ನ ಒಳಗಡೆಯೇ ಮೀನುಗಾರಿಕೆ ನಡೆಯುತ್ತದೆ.

ಒಂದು ಹಂತದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡರೆ ಉತ್ತಮ ಮೀನುಗಾರಿಕೆ ನಡೆಸಬಹುದು ಎಂಬ ಮಾತಿದೆ. ಆದರೆ, ಸಾಮಾನ್ಯಕ್ಕಿಂತ ಜಾಸ್ತಿಯಾಗಿ ಸಮುದ್ರ ಅಬ್ಬರಿಸಿದರೆ ನಾಡದೋಣಿಗಳ ಸಂಚಾರಕ್ಕೆ ಅಪಾಯ. ಮಂಗಳೂರಿನ ಬೆಂಗ್ರೆಯಿಂದ ಹೆಜಮಾಡಿವರೆಗೆ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ)ವ್ಯಾಪ್ತಿಯಲ್ಲಿ ರಾಣಿಬಲೆ ಹಾಗೂ ಪಟ್ಟೆ ಬಲೆ ಸಹಿತ ನಾಡದೋಣಿ ಮೀನುಗಾರಿಕೆ ನಡೆಸುವ ಸುಮಾರು 2,500ಕ್ಕೂ ಅಧಿಕ ಮಂದಿಗೆ ಪಾಸ್‌ಗಳನ್ನು ನೀಡಲಾಗುತ್ತದೆ.

ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಒಳಭಾಗದಲ್ಲಿ ಕೆ ಕೆ ಗೇಟ್‌ (ಬೀಚ್‌ ಸಮೀಪ) ಮೂಲಕ ಕಡಲಿಗಿಳಿಯುವ ನಾಡದೋಣಿಯವರಿಗೆ ವಿಶೇಷ ಪಾಸ್‌ ವ್ಯವಸ್ಥೆ ಇದೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜೂನ್‌ನಿಂದ ಸಪ್ಟೆಂಬರ್‌ವರೆಗೆ ನಾಡದೋಣಿ ಮೀನುಗಾರಿಕೆ ನಡೆಸುವವರಿಗೆ ಎನ್‌ಎಂಪಿಎ ಭಾಗದಿಂದ ತೆರಳಲು (ಬೆಳಗ್ಗೆ 6ಕ್ಕೆ ತೆರಳಿ ಸಂಜೆ 6ಕ್ಕೆ ವಾಪಸ್‌)ಅವಕಾಶವಿದೆ. ಉಳಿದಂತೆ ಕಡಲಿನಲ್ಲಿ ಯಾಂತ್ರಿಕ ಬೋಟ್‌ಗಳಿಗೆ ಅಪಾಯ ಎದುರಾದರೆ ಅಂತಹ ಸಂದರ್ಭ ಬೋಟ್‌ ನಿಲುಗಡೆಗೆ ಮಾತ್ರ ಎನ್‌ಎಂಪಿಎ ವ್ಯಾಪ್ತಿಯಲ್ಲಿ ಅವಕಾಶವಿದೆ. ನಾಡದೋಣಿ ಮೀನುಗಾರಿಕೆಗೆ ತೆರಳುವವರು ಮಾಹಿತಿಯನ್ನು ಮೀನುಗಾರಿಕಾ ಇಲಾಖೆಗೆ ನೀಡಬೇಕಾಗುತ್ತದೆ. ಇಲಾಖೆಯು ಪರಿಶೀಲಿಸಿ ಅವರಿಗೆ ಐಡಿ ಕಾರ್ಡ್‌ ನೀಡುತ್ತದೆ. ಅದನ್ನು ಎನ್‌ಎಂಪಿಎ ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟವರಿಗೆ ಪಾಸ್‌ ನೀಡುತ್ತದೆ. ಇದರ ಉಸ್ತುವಾರಿಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಯವರನ್ನು ಎನ್‌ಎಂಪಿಎಯಲ್ಲಿ ನಿಯೋಜಿಸಲಾಗುತ್ತದೆ. ಸದ್ಯ ಪಾಸ್‌ ವಿತರಣೆ ಪ್ರಗತಿಯಲ್ಲಿದೆ.

“ಕೆಲವೇ ದಿನದಲ್ಲಿ ನಾಡದೋಣಿ ಸಂಚಾರ’ಮೀನುಗಾರರ ಸುರಕ್ಷತೆದೃಷ್ಟಿಯಿಂದ ಜೂನ್‌ನಿಂದ
ಸಪ್ಟೆಂಬರ್‌ವರೆಗೆ ನಾಡದೋಣಿ ಗಳ ಆಗಮನ- ನಿರ್ಗಮನಕ್ಕೆ ಎನ್‌ಎಂಪಿಎಯಲ್ಲಿ ಅನುಮತಿ ಇರುತ್ತದೆ. ಇದಕ್ಕಾಗಿ ಪ್ರತ್ಯೇಕಪಾಸ್‌ ವ್ಯವಸ್ಥೆ ಇರುತ್ತದೆ. ಕಡಲು ಇನ್ನೂ ಪ್ರಕ್ಷುಬ್ಧವಾಗಿಲ್ಲದ ಕಾರಣ ದಿಂದ ನಾಡದೋಣಿ ಸಂಚಾರ ಇನ್ನೂ ಆರಂಭವಾಗಿಲ್ಲ. ಹವಾ ಮಾನ ಪರಿಶೀಲಿಸಿ, ಎನ್‌ಎಂಪಿಎ ನಿಯಮಾವಳಿಯನ್ನು ಪಾಲಿಸಿಕೊಂಡು ಮೀನು ಗಾರಿಕೆ ನಡೆಸಲಾಗುತ್ತದೆ.
-ಅಶ್ವಥ್‌ ಕಾಂಚನ್‌,
ಅಧ್ಯಕ್ಷರು ಕರಾವಳಿ ನಾಡದೋಣಿ, ಮೀನುಗಾರರ ಸಂಘ, ನವಮಂಗಳೂರು ವಲಯ

 

Advertisement

Udayavani is now on Telegram. Click here to join our channel and stay updated with the latest news.

Next