ಬೆಳಗಾವಿ: ರಾಜಸ್ಥಾನದ ಅಜ್ಮೀರದಿಂದ ಪೊಲೀಸರ ಕಣ್ಣು ತಪ್ಪಿಸಿ ಬಂದು ಕರ್ನಾಟಕ ಗಡಿಯಲ್ಲಿ ಸಿಕ್ಕಿಬಿದ್ದ 38 ಜನರ ಗುಂಪಿನಲ್ಲಿ 30 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಆದರೆ ಗಡಿ ಭಾಗದಲ್ಲೇ ಇವರನ್ನು ತಡೆದ ಕರ್ನಾಟಕ ಪೊಲೀಸರಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ.
ದೆಹಲಿಯ ನಿಜಾಮುದ್ದಿನ್ ಜಮಾತ್ ಮರ್ಕಜ್ ದಿಂದ ನೇರವಾಗಿ ಅಜ್ಮೀರ ದರ್ಗಾಕ್ಕೆ ಹೋಗಿದ್ದ ಈ 38 ಜನರು ಬಸ್ ಮೂಲಕ ಪಾಸ್ ಸಹಾಯದಿಂದ ಕೊಲ್ಲಾಪುರವರೆಗೆ ಬಂದಿದ್ದಾರೆ. ಅಲ್ಲಿಂದ ಮಹಾರಾಷ್ಟ್ರ ಗಡಿ ದಾಟಿ ಬರುವಾಗ ಪೊಲೀಸರು ತಡೆ ಹಿಡಿದು ವಾಪಸ್ಸು ಕಳುಹಿಸಿದ್ದಾರೆ. ಒಂದೆರಡು ದಿನ ತಡೆದು ಅಲ್ಲಿಯೇ ಕಾಲ ಕಳೆದು ಕಾಲ್ನಡಿಗೆ ಮೂಲಕ ಬರುವಾಗ ನಿಪ್ಪಾಣಿ ಬಳಿ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಕೂಡಲೇ ಈ ಎಲ್ಲರನ್ನೂ ನಿಪ್ಪಾಣಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ತಪಾಸಣೆ ನಡೆಸಿದಾಗ ಇದರಲ್ಲಿ 30 ಜನರಿಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿಯ 22 ಮತ್ತು ಬಾಗಲಕೋಟೆಯ 8 ಜನರಿಗೆ ಸೋಂಕು ದೃಢವಾಗಿದೆ.
ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಎಲ್ಲರೂ ಅವರವರ ಮನೆಗೆ ಹೋಗಿದ್ದರೆ ಮುಂದೆ ಮಹಾ ಮಾರಿ ಕೋವಿಡ್-19 ಸೋಂಕು ಎಲ್ಲ ಕಡೆಯೂ ಪಸರಿಸುವ ಸಾಧ್ಯತೆ ಇತ್ತು. ಪೊಲೀಸರು ಜಾಣ್ಮೆ ವಹಿಸಿ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದರಿಂದ ಸಾರ್ವಜನಿಕರಿಗೆ ಹಾಗೂ ಕುಟುಂಬಸ್ಥರಿಗೆ ತಗುಲುತ್ತಿದ್ದ ಸೋಂಕು ಹತೋಟಿಗೆ ತಂದಂತಾಗಿದೆ. ಮುಂದಿನ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ.
ಭೈರೋಬಾ ಕಾಂಬಳೆ