Advertisement

ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ ಬೀರುತ್ತಿದೆ ದುರ್ನಾತ

01:00 AM Feb 21, 2019 | Harsha Rao |

ಉಡುಪಿ: ಕುಂದಾಪುರ-ಉಡುಪಿ ಸಂಪರ್ಕದ ರಾ.ಹೆ. 66ರಲ್ಲಿ ನಿಟ್ಟೂರು ಪರಿಸರ ಈಗ ನಿತ್ಯ ದುರ್ವಾಸನೆಯ ಬೀಡಾಗಿದೆ. ಇದಕ್ಕೆ ಕಾರಣ ಇಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕ.  ಇದರಿಂದ ಇಲ್ಲಿನ ನಿವಾಸಿಗಳಿಗೆ ಬದುಕು ದುಸ್ತರವಾಗಿದೆ.  ನಗರದ ಫ್ಲಾಟ್‌, ಅಂಗಡಿ, ಹೊಟೇಲ್‌ಗ‌ಳ ಕೊಳಚೆ ನೀರು, ಶೌಚಾಲಯದ ನೀರು ಒಳಚರಂಡಿಯ ಮೂಲಕ ನೇರವಾಗಿ ನಿಟ್ಟೂರಿನಲ್ಲಿರುವ ಶುದ್ಧೀಕರಣ ಘಟಕಕ್ಕೆ ತಲುಪುತ್ತದೆ. ಇಲ್ಲಿ ಕೊಳಚೆ ನೀರನ್ನು ಶುದ್ಧೀಕರಣಗೊಳಿಸಿ ಹೊರಗೆ ಬಿಡಲಾಗುತ್ತದೆ. ಕೊಳಚೆ ನೀರು ಶುದ್ಧೀಕರಣ ವೇಳೆ (ಪ್ಯೂರಿಫೈ)ಗೆ ಅಗತ್ಯವಿರುವಷ್ಟು ಆಲಂ (ಭೂಗರ್ಭದಲ್ಲಿ ಸಿಗುವ ಸುಣ್ಣ) ಬಳಸಬೇಕಾಗುತ್ತದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಆಲಂ ಬಳಸದೇ ಇರುವುದರಿಂದ ವಾಸನೆ ವಿಪರೀತವಾಗಿದೆ.  

Advertisement

 2005ರಲ್ಲಿ 2ನೇ ಹಂತ ವಿಸ್ತರಣೆ
1988ರಲ್ಲಿ ಮೊದಲ ಹಂತದಲ್ಲಿ ತೆರೆದ ಕೊಳಚೆ ನೀರು ಹೊಂಡ ನಿರ್ಮಿಸಲಾಗಿತ್ತು. ಅನಂತರ 2ನೇ ಹಂತದಲ್ಲಿ  2005ರಲ್ಲಿ ಒಳಚರಂಡಿ ನೀರು ಶುದ್ಧೀಕರಣ ಯೋಜನೆಯಡಿ ಘಟಕ ವಿಸ್ತರಣೆಯಾಗಿತ್ತು. ಆಗ ಈ ಪ್ರದೇಶದಲ್ಲಿ ಕೆಲವು ಮನೆಗಳಿದ್ದವು. ಈಗ ಸಾಕಷ್ಟಿವೆ. ಆಸುಪಾಸು ಮನೆಗಳು ನಿರ್ಮಾಣವಾಗುವ ಮೊದಲೇ ಕಡಿವಾಣ ಹಾಕಬೇಕಿತ್ತು. ಈಗ ನಿಯಮ ಮೀರಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸಮಸ್ಯೆ ಜಟಿಲ
ಗೊಳಿಸಿದೆ.  

ಉಸ್ತುವಾರಿಗೆ ಸಿಬಂದಿ ಇಲ್ಲ
ಘಟಕ ವಿಸ್ತರಣೆಯಾಗಿ 14 ವರ್ಷಗಳು ಕಳೆದಿವೆ. ಇದುವರೆಗೂ ಘಟಕಕ್ಕೆ ಸಂಬಂಧಿಸಿ ಒಬ್ಬ ಅಧಿಕಾರಿಯೂ ನೇಮಕವಾಗಿಲ್ಲ. ಇದರ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಹೊರ ಗುತ್ತಿಗೆದಾರರು ಕೊಳಚೆ ನೀರಿನ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹೀಗಾಗಿದೆ ಎಂಬ ಆರೋಪವಿದೆ.  

ಸಂಕಷ್ಟದಲ್ಲಿವೆ 250 ಮನೆ
ನಿಟ್ಟೂರು ಸುತ್ತಮುತ್ತ ಸುಮಾರು 250 ಮನೆಗಳಿವೆ. ಇಲ್ಲಿ ನಿವಾಸಿಗಳಿಗೆ ಪ್ರತಿನಿತ್ಯ ಕೆಟ್ಟವಾಸನೆಯಿಂದ ವಾಕರಿಕೆ ಹುಟ್ಟಿಸುತ್ತಿದೆ. ಇದರಿಂದ ಬೇಸತ್ತ ಅವರು ಬದುಕೇ ಬೇಡವೆನ್ನಿಸುವ ಮಟ್ಟಿಗೆ ಪರಿತಪಿಸುತ್ತಿದ್ದಾರೆ. ಈಗಾಗಲೇ ಆನೇಕ ಕುಟುಂಬಗಳು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ತಮ್ಮ ಜಾಗವನ್ನು ಮಾರಾಟ ಮಾಡಿ ಬೇರೆಡೆಗೆ ಬಂದು ನೆಲೆಸಿದ್ದಾರೆ. ಇನ್ನೂ ಹಲವರು ಕಡಿಮೆ ಕ್ರಯಕ್ಕೆ ಸ್ಥಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ.  

ನಗರಸಭೆ ಜನಪ್ರತಿನಿಧಿಗಳು ಇನ್ನೂ ಅಧಿಕಾರ ಸ್ವೀಕರಿಸದೆ ಇರುವುದರಿಂದ ಚುನಾಯಿತ ವಾರ್ಡ್‌ ಸದಸ್ಯರಿಗೆ ಸಮಸ್ಯೆಯ ಬಗ್ಗೆ ಕೇಳುವ ಅಧಿಕಾರವಿಲ್ಲದಂತಾಗಿದೆ. ಇದರಿಂದಾಗಿ ವಾಸನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.   

Advertisement

ಬೆಳಗ್ಗೆ -ಸಂಜೆ ದುರ್ನಾತ ವಿಪರೀತ
ಚಳಿಗಾಲದಲ್ಲಿ ಕೊಳಚೆ ನೀರಿನ ಘಟಕದಲ್ಲಿ ದುರ್ವಾಸನೆ ಹೆಚ್ಚಾಗಿರುತ್ತದೆ. ಕೊಳೆಚೆ ನೀರು ಮೇಲೆ ಕೆಳಗೆ ಆಗುವ ಸಂದರ್ಭ ಹೈಡ್ರೋಜನ್‌ ಕಣವು ಹಿಮದ ಪದರದೊಂದಿಗೆ ಸೇರಿಕೊಂಡು ಗಾಳಿಯಲ್ಲಿ ಪಸರಿಸುತ್ತದೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆ ವಾಸನೆ ಹೆಚ್ಚಾಗಿರುತ್ತದೆ.
 -ರಾಘವೇಂದ್ರ,  ಪರಿಸರ ಎಂಜಿನಿಯರ್‌, ನಗರಸಭೆ, ಉಡುಪಿ.

ಅಧಿಕಾರಿಗಳ ನಿರ್ಲಕ್ಷ್ಯ
ನಗರಸಭೆಯಲ್ಲಿ ಜನಪ್ರತಿನಿಧಿಗಳು ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ನಿಟ್ಟೂರಿನಲ್ಲಿ  ಕಳೆದ ಹಲವು ತಿಂಗಳಿನಿಂದ ಫ‌ಟಕದಲ್ಲಿ ಕೊಳಚೆ ನೀರು ಶುದ್ಧೀಕರಣಕ್ಕೆ ಅಗತ್ಯವಿರುವಷ್ಟು  ಆಲಂ ಬಳಸದ ಕಾರಣ ನಿಟ್ಟೂರು ಪರಿಸರ ವಾಸನಾಮಯವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ
-ಸಂತೋಷ್‌ ಜತ್ತನ್‌, ಸ್ಥಳೀಯ ನಗರಸಭೆ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next