ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ಯುನೈಟೆಡ್ ಕಿಂಗ್‌ಡಂನ ಪ್ಲೇಮೌತ್ ಸ್ಕೂಲ್ ಆಫ್ ಬಯೋಲಜಿಕಲ್ ಆ್ಯಂಡ್ ಮರೈನ್ ಸೈನ್ಸ್ ವಿಶ್ವ ವಿದ್ಯಾನಿಲಯದೊಂದಿಗೆ ಹವಾಮಾನ ಬದಲಾವಣೆಯ ಪರಿಣಾಮ ಸಮುದ್ರ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಪರಿಣಾಮದ ವಿಚಾರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗೆ ಸಹಿ ಹಾಕಿದೆ. ನಿಟ್ಟೆ ವಿಶ್ವವಿದ್ಯಾನಿಲಯದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವು ಪ್ಲೇಮೌತ್ ಸ್ಕೂಲ್ ಆಫ್ ಬಯೋಲಜಿಕಲ್ ಆ್ಯಂಡ್ ಮೆರೈನ್ ಸೈನ್ಸ್ ವಿ.ವಿ.ಯೊಂದಿಗೆ ಯುನೆಸ್ಕೋ ಸೂಕ್ಷ್ಮಜೀವಿ ಸಂಪ ನ್ಮೂಲ ಕೇಂದ್ರದ ಭಾಗವಾಗಿ ಜಂಟಿ ಸಂಶೋಧನಾ ಅವಕಾಶಗಳು ಹಾಗೂ ಬೋಧನೆ ಮತ್ತು ಎರಡೂ ಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಪ್ರಯೋಜನವನ್ನು ಈ ಒಡಂಬಡಿಕೆ ಯಿಂದ ಪಡೆಯಬಹುದು.
ಹವಾಮಾನ ಬದಲಾವಣೆ ಮುಖ್ಯ ಸವಾಲು
ಸ್ಕೂಲ್ ಆಫ್ ಯೂನಿವರ್ಸಿಟಿ ಪ್ಲೇಮೌತ್ ಬಯೋಲಜಿಕಲ್ ಮತ್ತು ಮರೈನ್ ಸೈನ್ಸ್‌ನ ಮುಖ್ಯಸ್ಥ ಡಾ| ಮೈರಿ ನೈಟ್ ಮಾತನಾಡಿ, ಹವಾಮಾನ ಬದಲಾವಣೆಯು ನಮ್ಮ ಭೂಮಿ ಎದುರಿಸುತ್ತಿರುವ ಮುಖ್ಯ ಸವಾಲಾಗಿದ್ದು, ಈ ವಿಚಾರದ ಕುರಿತು ಸಂವಾದ ಸಂಶೋಧನೆಗಳು ಆಗಬೇಕಾಗಿದ್ದು, ಎರಡು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿವೆ ಎಂದರು.
ನಿಟ್ಟೆ ವಿ.ವಿ. ಉಪಕುಲಪತಿ ಪ್ರೊ| ಎಸ್. ರಮಾನಂದ ಶೆಟ್ಟಿ ಮಾತನಾಡಿ, ಪ್ಲೇಮೌತ್ ಕಡಲಿನ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ನಡೆಸಿರುವ ಒಡಂಬಡಿಕೆಯಿಂದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಲು ಸಹಕಾರಿಯಾಗಲಿದೆ. ನಿಟ್ಟೆ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ| ಇಂದ್ರಾಣಿ ಕರುಣಾ ಸಾಗರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯ ನಡೆಯಲಿದೆ ಎಂದರು.
ಯುಕೆಯ ಪ್ಲೇಮೌತ್ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ| ರಮಾನಂದ ಶೆಟ್ಟಿ ಮತ್ತು ಪ್ಲೇಮೌತ್ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾದ ಡಾ| ಮೈರಿ ನೈಟ್ ಸಹಿ ಹಾಕಿದರು. ಉಪನ್ಯಾಸಕ ಡಾ| ಲೂಸಿ ಟರ್ನರ್ ಮತ್ತಿತರರು ಉಪಸ್ಥಿತರಿದ್ದರು.