Advertisement

ಎರಡು ದಶಕಗಳಿಂದ ಡಾಮರು ಕಾಣದ ನಿಟ್ಟೆ-ಪರಪ್ಪಾಡಿ ಸಂಪರ್ಕ ರಸ್ತೆ

12:54 AM Jun 07, 2019 | Team Udayavani |

ಕಾರ್ಕಳ: ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ನಿಟ್ಟೆ- ಪರಪ್ಪಾಡಿ ಸಂಪರ್ಕ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.

Advertisement

ಸುಮಾರು 4.5 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜಲ್ಲಿ ಕಲ್ಲು, ಹೊಂಡ ಗುಂಡಿಗಳಿಂದ ಆವೃತವಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. 20 ವರ್ಷಗಳ ಹಿಂದೆ ಡಾಮರೀಕರಣಗೊಂಡ ಈ ರಸ್ತೆ ಬಳಿಕ ಡಾಮರು ಕಂಡಿಲ್ಲ. ಬಾರಾಡಿ, ಬೆಳುವಾಯಿಯನ್ನು ಸಂಪರ್ಕಿಸಲು ಈ ರಸ್ತೆ ಹತ್ತಿರದ ಮಾರ್ಗವಾಗಿದ್ದು, ಅಭಿವೃದ್ಧಿಗೊಂಡಲ್ಲಿ ಸಾಕಷ್ಟು ಪ್ರಯೋಜನವಾಗಲಿದೆ. ನಿಟ್ಟೆ ಹಾಳೆಕಟ್ಟೆಯ ನೂರಾರು ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, ದುರಸ್ತಿಗಾಗಿ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆತಿಲ್ಲ.

ನಿಟ್ಟೆ ಪರಪ್ಪಾಡಿ ಭಾಗದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿವೆ. ಶಾಲಾ ಮಕ್ಕಳು ರಸ್ತೆ ಬದಿ ನಡೆದುಕೊಂಡು ಹೋಗುವಾಗ ವಾಹನಗಳು ಸಂಚರಿಸಿದರೆ ಜಲ್ಲಿಕಲ್ಲುಗಳು ಮಕ್ಕಳ ಮೇಲೆ ಬೀಳುತ್ತವೆ. ಬೇಸಗೆಯಲ್ಲಿ ಧೂಳಿನ ಗೋಳಾದರೆ, ಮಳೆಗಾಲದಲ್ಲಿ ಕೆಸರಿನ ಗೋಳು ಎನ್ನುತ್ತಾರೆ ಗ್ರಾಮಸ್ಥರು.

ಬಸ್‌ ಇಲ್ಲ

ಈ ಭಾಗಕ್ಕೆ ಬಸ್‌ ಸೌಲಭ್ಯವಿಲ್ಲ. ರಸ್ತೆ ದುಃಸ್ಥಿತಿ ಕಂಡು ಆಟೋದವರೂ ಬರಲು ಹಿಂದೇಟು ಹಾಕುತ್ತಾರೆ. ಒಂದು ವೇಳೆ ರಿಕ್ಷಾದವರು ಬರಲು ಒಪ್ಪಿದರೂ ದುಪ್ಪಟ್ಟು ಬಾಡಿಗೆ ತೆರಬೇಕಾಗುತ್ತದೆ. ದುಪ್ಪಟ್ಟು ಹಣ ನೀಡಲು ಮುಂದಾದರೂ ಕೆಲವೊಮ್ಮೆ ಬರಲು ನಿರಾಕರಿಸುವ ಸಂದರ್ಭವೂ ಇದೆ ಎನ್ನುವುದು ಸ್ಥಳೀಯರ ಅಳಲು.

Advertisement

ಚರಂಡಿಯೂ ಇಲ್ಲ

ಹದಗೆಟ್ಟ ರಸ್ತೆಯ ಹೊಂಡ ಗುಂಡಿಗಳಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಗೊಳ್ಳಲಿದೆ. ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಮತ್ತಷ್ಟು ದೊಡ್ಡ ಪ್ರಮಾಣದ ಹೊಂಡಗಳು ನಿರ್ಮಾಣವಾಗುತ್ತಿವೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚರಗೊಂಡು ರಸ್ತೆ ಅಭಿವೃದ್ಧಿ ಮಾಡಬೇಕಾಗಿದೆ.
-ಸಂದೇಶ್‌ ಕುಮಾರ್‌, ನಿಟ್ಟೆ
Advertisement

Udayavani is now on Telegram. Click here to join our channel and stay updated with the latest news.

Next