Advertisement

ಸದಭಿರುಚಿಯ ಸಿನೆಮಾಗಳು ಬೆಳೆಯಲಿ: ಸುವರ್ಣ

07:45 AM Apr 17, 2018 | Karthik A |

ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನ ಭಾರತ್‌ ಮಾಲ್‌ ನ ಭಾರತ್‌ ಸಿನಿಮಾಸ್‌ ನಲ್ಲಿ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ ಚಾಲನೆ ದೊರಕಿತು. ಎ. 19ರ ವರೆಗೆ ವಿವಿಧ ಭಾಷೆಗಳ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ರಂಗಕರ್ಮಿ ಸದಾನಂದ ಸುವರ್ಣ ಅವರು ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಸದಭಿರುಚಿಯ ಸಿನೆಮಾಗಳು ಇನ್ನಷ್ಟು ಬರಬೇಕಿವೆ. ಪ್ರೇಕ್ಷಕರು ಕೂಡ ಉತ್ತಮ ಅಭಿರುಚಿಯ ಸಿನೆಮಾಗಳನ್ನೇ ಬಯಸುತ್ತಾರೆ. ಆಸಕ್ತಿದಾಯಕ ಸಿನೆಮಾ ಪ್ರದರ್ಶನಗಳನ್ನು ವೀಕ್ಷಿಸುವ ಮೂಲಕ ಸಿನೆಮಾಗಳಿಗೆ ಪ್ರೇಕ್ಷಕರಿಗೆ ಕೊರತೆ ಇಲ್ಲ ಎಂಬುದನ್ನು ಕರಾವಳಿ ಜನತೆ ತೋರಿಸಿಕೊಡಬೇಕಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಿಂದ ಮಂಗಳೂರಿಗರಿಗೆ ಒಳ್ಳೆಯ ಚಿತ್ರಗಳನ್ನು ನೋಡುವ ಭಾಗ್ಯ ದೊರೆತಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ. ಉಪ ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ ಅವರು  ಮಾತನಾಡಿ, ಈ ಚಲನಚಿತ್ರೋತ್ಸವವು ಚಲನಚಿತ್ರ ನಿರ್ಮಾಪಕರಿಗೆ ಮತ್ತು ಚಿತ್ರ ವೀಕ್ಷಕರಿಗೆ ಸೂಕ್ತವಾದ ವೇದಿಕೆ ಒದಗಿಸಲಿದೆ, ಮಂಗಳೂರಿನ ಜನರಿಗೆ ಜಾಗತಿಕ ಮಟ್ಟದಲ್ಲಿ ವಿಮರ್ಶಾತ್ಮಕವಾಗಿ ಪ್ರಶಂಸೆ ಪಡೆದ ಚಲನಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಿದೆ ಎಂದರು. ಚಿತ್ರೋತ್ಸವದ ಸಂಘಟಕ ಪ್ರೊ| ರವಿರಾಜ್‌ ಕಿಣಿ, ವಿದ್ಯಾರ್ಥಿ ಸಂಘಟಕ ಮೈತ್ರೇಯ್‌ ದೇಶಪಾಂಡೆ ಉಪಸ್ಥಿತರಿದ್ದರು.

4 ದಿನ, 60 ಸಿನೆಮಾ
ಸಂಘಟಕ ಪ್ರೊ| ರವಿರಾಜ್‌ ಕಿಣಿ ಮಾತನಾಡಿ, ಭಾರತ್‌ ಸಿನೆಮಾಸ್‌ನಲ್ಲಿ ಎ. 19ರವರೆಗೆ 4ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ವಿವಿಧ ಭಾಷೆಯ 60 ಸಿನೆಮಾಗಳು ಪ್ರದರ್ಶನ ಕಾಣಲಿವೆ. 3 ಸ್ಕ್ರೀನ್‌ಗಳಲ್ಲಿ ದಿನಕ್ಕೆ ತಲಾ ಐದು ಅಥವಾ ಆರು ಪ್ರದರ್ಶನಗಳಿರುತ್ತವೆ. 40 ಮಂದಿ ಸಿನೆಮಾ ನಿರ್ಮಾಪಕರು ಪಾಲ್ಗೊಳ್ಳಲಿದ್ದಾರೆ. ಹಿಂದಿ, ಕನ್ನಡ, ಕೊಂಕಣಿ, ಮಲಯಾಳ, ಬಂಗಾಲಿ, ಗುಜರಾತಿ, ತಮಿಳು, ಫ್ರೆಂಚ್‌, ಚೀನೀ ಭಾಷೆಗಳ ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮಕ್ಕಳ ಸಿನೆಮಾವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಲವು ಮಕ್ಕಳ ಚಿತ್ರಗಳ ಪ್ರದರ್ಶನವಿದೆ. ಚಿತ್ರ ನಿರ್ಮಾಪಕರ ಜತೆ ಪ್ರೇಕ್ಷಕರಿಗೆ ಸಂವಾದಕ್ಕೆ ಅವಕಾಶವಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾಗಳು ಕೂಡ ಇರುತ್ತವೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next