ಕಾರ್ಕಳ: ಇಂದು ನಾವು ಯಾವ ಪರಿಸ್ಥಿತಿಯಲ್ಲಿದ್ದೇವೋ ಆ ಪರಿಸ್ಥಿತಿಯೇ ಅತ್ಯಂತ ಹರ್ಷದಾಯಕ ವಾದುದು. ಜಗತ್ತಿನ ಎಲ್ಲ ವಿಭಾಗಗಳು ಇಂದು ಬೆಳೆಯುತ್ತಿವೆ, ಪ್ರತಿಯೊಂದು ಕ್ಷೇತ್ರಕ್ಕೂ ಅದರದ್ದೇ ಆದ ವೇದಿಕೆ ಹಾಗೂ ಅವಕಾಶವಿದೆ ಎಂದು ಮಣಿ ಪಾಲ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ಗೌತಮ್ ಪೈ ಹೇಳಿದ್ದಾರೆ.
ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಶನಿವಾರ ನಡೆದ “ಇನ್‌ಸ್ಟಿಟ್ಯೂಟ್ ಡೇ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ವೃತ್ತಿಪರತೆ ಹೆಚ್ಚು ಮಹತ್ವವನ್ನು ಪಡೆಯುತ್ತಿದೆ. ನಿಮಗೆ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಗಮನಾರ್ಹವಾಗಿ ತೊಡಗಿಸಿಕೊಳ್ಳಲು ಹೆಚ್ಚಿನ ಅವಕಾಶ ಗಳಿವೆ. ಇದು ಅತ್ಯಂತ ಸಂತಸದ ಸನ್ನಿವೇಶ. ಸ್ಪರ್ಧೆ ಮಾತ್ರ ಮುಖ್ಯವಲ್ಲ, ಸ್ಪರ್ಧಾತ್ಮಕ ಸೃಜನಶೀಲತೆ ಅತೀ ಮುಖ್ಯ ಎಂದರು.
ವಿದ್ಯಾರ್ಥಿಗಳು ಶಿಸ್ತು, ಸಂಯಮ, ಅನುಷ್ಠಾನ, ಸೃಜನಶೀಲತೆ, ವೃತ್ತಿಪರತೆ, ನಿರೀಕ್ಷೆ ಇವುಗಳಿಂದ ತುಂಬಿಕೊಳ್ಳಬೇಕು. ಉದ್ದಿಮೆಶಾಹಿತ್ವದಲ್ಲಿ ಸಾಕಷ್ಟು ವೈಫಲ್ಯಗಳನ್ನೂ ಮೀರಿ ಮುಂದಕ್ಕೆ ಬರುವುದು ಕೂಡ ಅತ್ಯಂತ ಮಹತ್ವದ್ದು, ಇದು ಪರಿಣಾಮಕಾರಿ ಕಲಿಕೆಯಿಂದಷ್ಟೇ ಸಾಧ್ಯ ಎಂದವರು ಹೇಳಿದರು.
ಪ್ರೊ| ಡಾ| ಎನ್. ಎಸ್. ಶೆಟ್ಟಿ ಮಾತನಾಡಿ, ಉದ್ದಿಮೆಶಾಹಿತ್ವದಲ್ಲಿರುವ ನಾಯಕತ್ವ ಗುಣಗಳನ್ನು ಮೈಗೂಡಿಸಿ ಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಡಾ| ಶಂಕರನ್ ವಹಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.