ನವದೆಹಲಿ: ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಭಾರತೀಯ ಜನತಾ ಪಕ್ಷ ಎನ್ ಡಿಎ ಮೈತ್ರಿಕೂಟದ ಜೊತೆ ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಸೇನೆಯ ಅಗ್ನಿಪಥ್ ನೇಮಕಾತಿ ಯೋಜನೆ ಬಗ್ಗೆ ಪರಿಶೀಲಿಸುವಂತೆ ಬೇಡಿಕೆ ಇಡುವುದಾಗಿ ತಿಳಿಸಿದೆ.
ಇದನ್ನೂ ಓದಿ:IPL: ರಾಜಸ್ಥಾನ್ ತೊರೆದು ಚೆನ್ನೈ ಕಿಂಗ್ಸ್ ಸೇರುತ್ತಾರಾ ಅಶ್ವಿನ್?
ಅಗ್ನಿಪಥ್ ಯೋಜನೆ ವಿರುದ್ಧ ಜನರಲ್ಲಿ ಆಕ್ರೋಶವಿದೆ, ಇದು ಚುನಾವಣೆಯಲ್ಲೂ ನಮಗೆ ಗೋಚರವಾಗಿದೆ ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ. ಈ ಬಗ್ಗೆ ತುಂಬಾ ವಿರೋಧವಿದೆ ಎಂದರು.
ನಮಗೆ ಈ ಬಗ್ಗೆ ಅಸಮಾಧಾನವಿಲ್ಲ, ಆದರೆ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದಾಗ, ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಆದರೆ ನಾವು ಒಂದು ದೇಶ, ಒಂದು ಚುನಾವಣೆ ಪರವಾಗಿದ್ದೇವೆ ಎಂದು ತ್ಯಾಗಿ ಹೇಳಿದರು.
ಅಗ್ನಿಪಥ್ ಯೋಜನೆ ಪ್ರಕಾರ, ವ್ಯಕ್ತಿಯೊಬ್ಬನನ್ನು ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಭೂಸೇನೆ, ವಾಯುಸೇನೆ, ನೌಕಾಸೇನೆಗೆ ನೇಮಕಾತಿ ಮಾಡುವುದು. ಇದರಲ್ಲಿ ಶೇ.25 ಮಾತ್ರ 15 ವರ್ಷಗಳವರೆಗೆ ಪೂರ್ಣಕಾಲಿಕ ಯೋಧನಾಗಿ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ಯೋಜನೆ ವಿರುದ್ಧ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.