ಪಟ್ನಾ : ಬಕ್ಸಾರ್ ನ ನಂದನ್ ಎಂಬಲ್ಲಿ ಇಂದು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ “ಸಮೀಕ್ಷಾ ಯಾತ್ರೆ’ಯ ವೇಳೆ ಅವರ ವಾಹನಗಳ ಸಾಲಿನ ಮೇಲೆ ಕಲ್ಲೆಸೆದು ದಾಳಿ ನಡೆಸಿದ ಘಟನೆ ವರದಿಯಾಗಿದೆ.
ದಾಳಿಕೋರರು ಕಲ್ಲೆಸೆದರೂ ಮುಖ್ಯಮಂತ್ರಿ ನಿತೀಶ್ ಅವರನ್ನು ಸುರಕ್ಷಿತವಾಗಿ ಪಾರು ಮಾಡಲಾಯಿತು. ಆದರೆ ನಿತೀಶ್ ಅವರ ಬೆಂಗಾವಲಿಗಿದ್ದ ಇಬ್ಬರು ಭದ್ರತಾ ಸಿಬಂದಿಗಳು ಗಾಯಗೊಂಡರು.
ವರದಿಗಳ ಪ್ರಕಾರ ನಂದನ ಗ್ರಾಮದವರು ಮುಖ್ಯಮಂತ್ರಿ ನಿತೀಶ್ ದಲಿತ ಕೇರಿಗೆ ಭೇಟಿ ನೀಡಬೇಕೆಂದು ಬಯಸಿದ್ದರು. ಆದರೆ ಆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯ ಕಲ್ಲೆಸೆತದ ಘಟನೆಗೆ ಕಾರಣವಾಯಿತು.ಸಿಎಂ ನಿತೀಶ್ ಅವರನ್ನು ಆ ಸ್ಥಳದಿಂದ ಸುರಕ್ಷಿತವಾಗಿ ಬೇರೆಡೆಗೆ ಒಯ್ಯಲಾಯಿತು.
ಸಿಎಂ ನಿತೀಶ್ ತಮ್ಮ ಸರಕಾರ ಕಳೆದ ಕೆಲವು ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿಯನ್ನು ಅರಿಯಲು ಕಳೆದ ಡಿ.12ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.
ಈ ತಿಂಗಳ ಆದಿಯಲ್ಲಿ ಸಹಾರ್ಸಾ ಜಿಲ್ಲೆಯಲ್ಲಿ ಒಂದೆಡೆ ಯುವಕರ ಗುಂಪೊಂದು ತಮ್ಮ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದಾಗ ಅವರನ್ನು ನಿಯಂತ್ರಿಸಲು ಹೋದ ಪೊಲೀಸರನ್ನು ನಿತೀಶ್ ತಡೆದಿದ್ದರು.