Advertisement
2017ರಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಒಕ್ಕೂಟಕ್ಕೆ ಹಿಂದಿರುಗಿದ ಅನಂತರ ಅವರ ಪ್ರದರ್ಶನ ಹೇಗಿದೆಯೋ ಪರೀಕ್ಷಿಸಿ ನೋಡಿ. ಅವರು ತಮ್ಮೊಳಗೇ ಮುಳುಗಿ ಹೋಗಿದ್ದಾರೆ ಮತ್ತು ಅವರ “ಸಾಥ್ ನಿಶ್ಚಯ್’ (ಉತ್ತಮ ಆಡಳಿತಕ್ಕಾಗಿ 7 ನಿರ್ಣಯಗಳು) ಯೋಜನೆಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಇವೆಲ್ಲ ತೆರಿಗೆದಾರರ ಹಣವನ್ನು ಲೂಟಿ ಮಾಡುವುದಕ್ಕಿಂತ ಕಡಿಮೆ ಕೆಲಸವೇನೂ ಅಲ್ಲ! ಕ್ಷಮಿಸಿ, ನಾನು ಈ ಅಜೆಂಡಾದ ಭಾಗವಾಗಲಾರೆ. ಕೇವಲ ನಮ್ಮನ್ನು ಪ್ರಚೋದಿಸುವ ಮತ್ತು ಅವಮಾನ ಮಾಡುವ ಏಕೈಕ ಉದ್ದೇಶದಿಂದ ಈಗ ನಿತೀಶ್ ಕುಮಾರ್ “ಸಾಥ್ ನಿಶ್ಚಯ್ ಪಾರ್ಟ್ 2′ ಅನಾವರಣಗೊಳಿಸಿದ್ದಾರೆ!
Related Articles
Advertisement
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಗೆ ಕೆಲಸ ಮಾಡುತ್ತಾರೋ ಗಮನಿಸಿ. ಆಡಳಿತದ ವಿಷಯದಲ್ಲಿ ಅವರು ನನ್ನ ರೋಲ್ ಮಾಡೆಲ್. ಮೋದಿಯವರ ಕಾರಣದಿಂದಾಗಿಯೇ ನಾವು 2014ರಿಂದ ಎನ್‌ಡಿಎ ಜತೆಗಿದ್ದೇವೆ. ನಾವು ನಿತೀಶ್ ಕುಮಾರ್‌ರಂತೆ ಒಕ್ಕೂಟದಿಂದ ಹೊರನಡೆದು, ಪ್ರಧಾನಿಗೆ ಸವಾಲೆಸೆದವರಲ್ಲ. ನಿತೀಶ್ ಅಂದು ನಂಬಿಕೆ ದ್ರೋಹ ಎಸಗಿದ್ದರು. ಮುಂದೆ ಜನರೇ ಅವರಿಗೆ ಪಾಠ ಕಲಿಸಿದರು. ಕೊನೆಗೆ ನಿತೀಶ್ ಪ್ರಧಾನಿ ಮೋದಿಯವರ ಆಶ್ರಯ ಪಡೆಯಬೇಕಾಯಿತು ಎನ್ನುವುದು ಬೇರೆ ವಿಷಯ.
ಹೌದು, ನಾನು ಪ್ರಧಾನಮಂತ್ರಿ ಮೋದಿಯವರ ಜತೆಗೆ ಅಚಲವಾಗಿ ನಿಲ್ಲುತ್ತೇನೆ. ಆದರೆ ಪ್ರತ್ಯೇಕವಾಗಿ ಸ್ಪರ್ಧಿಸಬೇಕು ಎಂದು ಈಗ ನಾವು ತೆಗೆದುಕೊಂಡಿರುವ ನಿರ್ಧಾರವು ನನ್ನ ಜನರ ಶ್ರೇಯೋಭಿವೃದ್ಧಿ ಮಾಡಲು ಅವಕಾಶ ಕಲ್ಪಿಸುತ್ತದೆ. ಯಾರಾದರೂ “ಅದೇಕೆ ನೀವು ಬಿಹಾರದಲ್ಲಿ ಎನ್‌ಡಿಎಯಿಂದ ದೂರವಾದಿರಿ?’ ಎಂದು ಪ್ರಶ್ನಿಸಿದಾಗ ನಾನು ಹೇಳುವುದಿಷ್ಟೆ- ನನ್ನ ಈ ನಿರ್ಧಾರಕ್ಕೆ ಸೀಟು ಹಂಚಿಕೆಯ ವಿಚಾರ ಕಾರಣವಾಗಲಿಲ್ಲ. ಸತ್ಯವೇನೆಂದರೆ, ಆ ವಿಷಯದ ಬಗ್ಗೆ ನಾವು ಹೆಚ್ಚು ಚರ್ಚೆಯನ್ನೂ ಮಾಡಿಲ್ಲ. ನನ್ನ ಪಕ್ಷದ ಕಾರ್ಯಕರ್ತರು, “ಬಿಹಾರ ಮತ್ತು ಬಿಹಾರಿಗಳ’ ಹಿತರಕ್ಷಣೆಯನ್ನು ಕಾಪಾಡಿ ಎಂದು ನನ್ನನ್ನು ಒತ್ತಾಯಿಸಿದರು. ಒಂದು ವಿಷಯದಲ್ಲಂತೂ ನಾನು ನಿಮಗೆ ಖಾತ್ರಿ ನೀಡುತ್ತೇನೆ- ನಿತೀಶ್ ಕುಮಾರ್‌ರನ್ನು ಅಧಿಕಾರದಿಂದ ಹೊರಹಾಕುತ್ತೇವೆ!
ಅಂದು ಆರ್ ಜೆಡಿಯನ್ನು ಕೆಡವಿದ್ದರು ರಾಂ ವಿಲಾಸ್, ಅವರ ಮಗ ಚಿರಾಗ್ ಜೆಡಿಯುಗೆ ಪೆಟ್ಟು ಕೊಡಬಲ್ಲರಾ? ಅದು 2004. ಯುಪಿ ಎ-1 ಸರಕಾರ ಅಧಿಕಾರಕ್ಕೆ ಬಂದಾಗ ಮೈತ್ರಿ ಕೂಟದ ಭಾಗವಾಗಿದ್ದ ಲಾಲೂ ಪ್ರಸಾದ್ ಯಾದವ್ ತಮ್ಮನ್ನು ರೈಲ್ವೇ ಸಚಿವರಾಗಿಸಬೇಕೆಂದು ಪಟ್ಟು ಹಿಡಿದು ಆ ಖಾತೆಯನ್ನು ಪಡೆದರು. ಇದರಿಂದಾಗಿ ಆ ಖಾತೆಯ ಮೇಲೆ ಕಣ್ಣಿಟ್ಟಿದ್ದ ರಾಂ ವಿಲಾಸ್ ಪಾಸ್ವಾನ್‌ರಿಗೆ ಲಾಲೂ ಮೇಲೆ ದ್ವೇಷ ಹುಟ್ಟಿಕೊಂಡಿತು. ಹೀಗಾಗಿ ಯುಪಿಎಯ ಭಾಗವಾಗಿದ್ದುಕೊಂಡೇ ಅವರು ಬಿಹಾರದಲ್ಲಿ ಆರ್‌ಜೆಡಿಯಿಂದ ದೂರವಾಗಿಬಿಟ್ಟರು. 2005ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಸ್ಪರ್ಧೆಗಿಳಿದಿದ್ದ 175 ಕ್ಷೇತ್ರಗಳಲ್ಲಿ ಪಾಸ್ವಾನ್ ತಮ್ಮ ಎಲ್‌ಜೆಪಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಇನ್ನೊಂದೆಡೆ ಲಾಲೂ ಆಡಳಿತವನ್ನು ಕಿತ್ತೆಸೆಯಬೇಕೆಂದು ಪ್ರಯತ್ನಿಸುತ್ತಿದ್ದ ನಿತೀಶ್‌ರ ಜೆಡಿಯು ಮತ್ತು ಬಿಜೆಪಿ ಮೈತ್ರಿಯು, ತಮ್ಮ ಜತೆ ಕೈಜೋಡಿಸಬೇಕೆಂದು ಪಾಸ್ವಾನ್‌ರನ್ನು ವಿನಂತಿಸಿತು. ಆದರೆ ಪಾಸ್ವಾನ್ ಈ ಆಹ್ವಾನವನ್ನು ನಿರಾಕರಿಸಿಬಿಟ್ಟರು. ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಆಗ ನಿತೀಶ್ ನೇತೃತ್ವದ ತಂಡ ಮತ್ತೆ ಪಾಸ್ವಾನ್‌ರ ಬೆಂಬಲ ಕೇಳಿತು. ಆದರೆ, ಪಾಸ್ವಾನ್ ಅವರು ಮುಸ್ಲಿಂ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತಂದರೆ ಮಾತ್ರ ತಾವು ಬಿಜೆಪಿ-ಜೆಡಿಯು ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಪಟ್ಟು ಹಿಡಿದರು. ಇದರಿಂದಾಗಿ ಯಾರಿಗೂ ಸರಕಾರ ರಚಿಸಲು ಆಗಲೇ ಇಲ್ಲ. ಆರು ತಿಂಗಳುಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಅನಂತರ ಮಧ್ಯಂತರ ಚುನಾವಣೆ ನಡೆದಾಗ ಪಾಸ್ವಾನ್‌ರ ಜತೆಗಿದ್ದ ಕೆಲವು ಪ್ರಮುಖ ನಾಯಕರು ನಿತೀಶ್ ಅವರಿಗೆ ಬೆಂಬಲ ನೀಡಿಬಿಟ್ಟರು! ನಿತೀಶ್ ಕುಮಾರ್ ಕುತಂತ್ರದಿಂದ ತಮ್ಮ ಪಕ್ಷವನ್ನು ಒಡೆದಿದ್ದಾರೆ ಎಂದು ಪಾಸ್ವಾನ್ ಆರೋಪಿಸಲಾರಂಭಿಸಿದರು. ಪರಿಣಾಮವಾಗಿ, ನಿತೀಶ್ ಹಾಗೂ ಪಾಸ್ವಾನ್ ನಡುವೆ ದೊಡ್ಡ ಬಿರುಕು ಮೂಡಿತು. ಮಧ್ಯಂತರ ಚುನಾವಣೆಯ ಫಲಿತಾಂಶ ಬಂದಿತು. ಸರ್ವಾಧಿಕಾರಿ ಆಡಳಿತ ಹಾಗೂ ಭ್ರಷ್ಟಾಚಾರದಿಂದ ಕುಖ್ಯಾತಿ ಪಡೆದಿದ್ದ ಲಾಲೂರ ಆರ್ ಜೆಡಿ ಮೂಲೆ ಗುಂಪಾಗಿಬಿಟ್ಟಿತು. ಎನ್‌ಡಿಎ ಮೈತ್ರಿ ಕೂಟ ಸರಕಾರ ರಚಿಸಿ, ನಿತೀಶ್ ಕುಮಾರ್‌ರನ್ನು ಮುಖ್ಯಮಂತ್ರಿಯಾಗಿಸಿತು. ಅಧಿಕಾರಕ್ಕೆ ಬಂದದ್ದೇ ತಡ ನಿತೀಶ್, ಪಾಸ್ವಾನ್‌ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಮುಂದಾದರು. “ಮಹಾ ದಲಿತ’ ಎಂಬ ಕೆಟಗರಿ ತೆರೆದರು. ಅದರಲ್ಲಿ ಪಾಸ್ವಾನ್‌ರ ಜಾತಿಯನ್ನು ಹೊರಗಿಟ್ಟು ಉಳಿದ ಎಲ್ಲ ದಲಿತ ವರ್ಗಗಳನ್ನೂ ಸೇರಿಸಿದರು. ಇದರಿಂದಾಗಿ ಒಂದು ಸಮಯದಲ್ಲಿ ಪಾಸ್ವಾನ್‌ರ ಪ್ರಮುಖ ಮತದಾರ ವರ್ಗವಾಗಿದ್ದ ದಲಿತರು ನಿತೀಶ್‌ರ ಬತ್ತಳಿಕೆಗೆ ಸೇರಿಬಿಟ್ಟರು. ಈ ಕಾರಣದಿಂದಾಗಿ ಎಲ್‌ಜೆಪಿ ರಾಜಕೀಯ ರಂಗದಲ್ಲಿ ಹಿಂದುಳಿದುಬಿಟ್ಟಿತು. ಅದೇನೇ ಇದ್ದರೂ ಪಾಸ್ವಾನ್‌ರಿಂದಾಗಿ ಅಂದು ಆರ್‌ಜೆಡಿ ಮೂಲೆಗುಂಪಾಯಿತು. ಈಗ ಅವರ ಮಗ ಜೆಡಿಯು ವಿರುದ್ಧ ಅಂಥದ್ದೇ ಪ್ರಯತ್ನಕ್ಕಿಳಿದಿದ್ದಾರೆ. ಆದರೆ ಚಿರಾಗ್ ಪಾಸ್ವಾನ್ ಇನ್ನೂ ಹೊಸಬರು, ತಂದೆ ರಾಮ್ ವಿಲಾಸ್‌ರಂಥ ರಾಜಕೀಯ ಪಟ್ಟುಗಳಾಗಲಿ ಅಥವಾ ವರ್ಚಸ್ಸಾಗಲಿ ಅವರಿಗೆ ಇಲ್ಲ. (ಕೃಪೆ- ಎನ್‌ಡಿಟಿವಿ) – ಚಿರಾಗ್ ಪಾಸ್ವಾನ್