ಹೊಸದಿಲ್ಲಿ : ನಾಳೆ ಮಂಗಳವಾರ ಎನ್‌ಡಿಎ ಹೊರತಾದ ಪಕ್ಷಗಳು ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ತೀರ್ಮಾನಿಸುವ ಸಲುವಾಗಿ ಕರೆದಿರುವ ಸಭೆಗೆ ಹಾಜರಾಗದಿರಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ. ನಿತೀಶ್ ಅವರ ಈ ನಿಲುವು ವಿರೋಧ ಪಕ್ಷಗಳಿಗೆ ಒದಗಿರುವ ಭಾರೀ ದೊಡ್ಡ ಹೊಡೆತವೆಂದು ತಿಳಿಯಲಾಗಿದೆ.
‘ವೈರಲ್ ಜ್ವರದಿಂದ ಪೀಡಿತನಾಗಿರುವ ನಾನು ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ; ಹಾಗಾಗಿ ನಾಳೆ ಮಂಗಳವಾರದ ಸಭೆಗೆ ಬರುವುದಿಲ್ಲ’ ಎಂದು ನಿತೀಶ್ ಹೇಳಿರುವುದಾಗಿ ವರದಿಯಾಗಿದೆ.
ಆದರೆ ವಾಸ್ತವವಾಗಿ ಬಿಹಾರ ಮಹಾ ಘಟಬಂಧನ ಮಿತ್ರ ಪಕ್ಷವಾಗಿರುವ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರ ವಿರುದ್ದದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಸಿಬಿಐ ದಾಳಿ, ತನಿಖೆ ನಡೆಯುತ್ತಿರುವುದರಿಂದ ನಿತೀಶ್, ವಿಪಕ್ಷಗಳ ಈ ಸಭೆಯಲ್ಲಿ ಕಾಣಿಸಿಕೊಳ್ಳಲು ಬಯಸಿಲ್ಲ ಎಂದು ಊಹಿಸಲಾಗಿದೆ.
ಹಾಗಿದ್ದರೂ ನಿತೀಶ್ ಅವರು ಮಂಗಳವಾರದಂದೇ ತನ್ನ ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರ ಸಭೆಯನ್ನು ಪಟ್ನಾದಲ್ಲಿ ಕರೆದಿರುವುದು ಅಚ್ಚರಿ ಮೂಡಿಸಿದೆ. ಕಳೆದ ತಿಂಗಳು ನಿತೀಶ್ ಅವರು ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯನ್ನು ತೀರ್ಮಾನಿಸುವ ಸಭೆಯನ್ನು ಕೂಡ ತಪ್ಪಿಸಿಕೊಂಡಿದ್ದರು.
ಇದೇ ವೇಳೆ ಇಂದು ಸೋಮವಾರ ನಡೆಯಬೇಕಿರುವ ಲೋಕ ಸಂವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅನಾರೋಗ್ಯದಿಂದಾಗಿ ರದ್ದು ಪಡಿಸಲಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.