ಪಾಟ್ನಾ:ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಏರಿರುವ ಹಿನ್ನೆಲೆಯಲ್ಲಿ ಲೋಕ್ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಬುಧವಾರ(ನವೆಂಬರ್ 11,2020) ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಚಿರಾಗ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಮಾತ್ರ ಗೆಲುವು ಸಾಧಿಸಿದ್ದಾರೆ. ಬಿಹಾರದ ಮತದಾರರು ಪ್ರಧಾನಿಯವರ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸಿ ಮತ ಚಲಾಯಿಸಿದ್ದ ಪರಿಣಾಮ ಬಿಜೆಪಿ ಬಿಹಾರದಲ್ಲಿ ಮತ್ತಷ್ಟು ಬಲಿಷ್ಠವಾಗಿದೆ. ಅಲ್ಲದೇ ಬಿಜಾರದ ಅಭಿವೃದ್ಧಿಗಾಗಿ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಲೋಕ್ ಜನಶಕ್ತಿ ಪಕ್ಷ ಕಠಿಣ ಸವಾಲನ್ನು ಒಡ್ಡಿತ್ತು. ನಮಗೆ ಹೆಚ್ಚಿನ ನಷ್ಟವೇನೂ ಆಗಿಲ್ಲ. ನಮಗೆ ಇನ್ನೂ ಅವಕಾಶ ಇದೆ.2025ರ ಚುನಾವಣೆಯಲ್ಲಿ ನಾವು ಸ್ಪರ್ಧಿಸಲಿದ್ದು, ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ:ಬಿಹಾರ ಫಲಿತಾಂಶ: ನಿತೀಶ್ ಪಕ್ಷದ ಹಿಲ್ಸಾ ಕ್ಷೇತ್ರದ ಅಭ್ಯರ್ಥಿ ಗೆದ್ದ ಅಂತರ ಕೇವಲ 12!
ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಪ್ರದರ್ಶನ ತೋರಿದೆ. ನನ್ನ ತಂದೆಯ ಸಾವಿನ ನಂತರ ನಮಗೆ ಹತ್ತು ದಿನಗಳ ಕಾಲ ಮಾತ್ರ ಸಿದ್ದತೆ ಮಾಡಿಕೊಳ್ಳಲು ಅವಕಾಶ ಸಿಕ್ಕಿತ್ತು. ಎಲ್ ಜೆಪಿಗೆ ಬಿಹಾರದ ಜನತೆಯ ಪ್ರೀತಿ ದೊರಕಿದೆ. ಸುಮಾರು 25 ಲಕ್ಷ ಮತದಾರರು “ಬಿಹಾರ ಮೊದಲು, ಬಿಹಾರಿ ಮೊದಲು” ಎಂಬ ಘೋಷವಾಕ್ಯದ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಶೇ.6ರಷ್ಟು ಮತ ಪಡೆದಿರುವುದಾಗಿ ಚಿರಾಗ್ ವಿವರಿಸಿದ್ದಾರೆ.
ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟ 125 ಸ್ಥಾನ ಪಡೆಯುವ ಮೂಲಕ ಸ್ಪಷ್ಪಬಹುಮತ ಪಡೆದು ಸತತ ನಾಲ್ಕನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ವಿರೋಧ ಪಕ್ಷಗಳಾದ ಮಹಾಮೈತ್ರಿಕೂಟ 110 ಸ್ಥಾನಗಳನ್ನು ಪಡೆದು ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ (75ಸ್ಥಾನ) ಹೊರಹೊಮ್ಮಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ ಜೆಪಿ ಒಂದು ಸ್ಥಾನದಲ್ಲಿ ಜಯಗಳಿಸಿದೆ.