ಪಟ್ನಾ : 2019ರ ಲೊಕಸಭಾ ಚುನಾವಣೆಗೆ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನಡೆದಿರುವ ಸೀಟು ಹೊಂದಾಣಿಕೆ ಬಗ್ಗೆ ಜೆಡಿಯು ಮುಖ್ಯಸ್ಥ , ಸಿಎಂ ನಿತೀಶ್ ಕುಮಾರ್ ಅವರಲ್ಲಿ ಅತೃಪ್ತಿ, ಅಸಮಾಧಾನ ಉಂಟಾಗಿರುವುದಾಗಿ ನಿಕಟ ಮೂಲಗಳು ಹೇಳಿವೆ.
ಇದು ದೃಢಪಟ್ಟಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು, ಎನ್‌ಡಿಎ ಕೂಟದಿಂದ ಹೊರ ಬಂದು ಏಕಾಕಿಯಾಗಿ ಚುನಾವಣೆಯನ್ನು ಹೋರಾಡುವ ಸಾಧ್ಯತೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆ ದೊಡ್ಡ ಸಂಕಷ್ಟವೇ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.
ಮೊನ್ನೆ ಗುರುವಾರ ಬಿಹಾರದಲ್ಲಿ ಎನ್‌ಡಿಎ – ಜೆಡಿಯು ಸೀಟು ಹೊಂದಾಣಿಕೆ ಅಂತಿಮಗೊಂಡಿತ್ತು. ಆ ಪ್ರಕಾರ ಬಿಹಾರದ ಒಟ್ಟು 40 ಸೀಟುಗಳಲ್ಲಿ ಇಪ್ಪತ್ತನ್ನು ಬಿಜೆಪಿ ತನ್ನಲ್ಲಿ ಉಳಿಸಿಕೊಂಡು 12 ಸೀಟುಗಳನ್ನು ಜೆಡಿಯುಗೆ ಬಿಟ್ಟುಕೊಟ್ಟಿತ್ತು. ಲೋಕ ಜನಶಕ್ತಿ ಪಾರ್ಟಿಗೆ 5 ಸೀಟುಗಳನ್ನು ಕೊಡಲಾಗಿತ್ತು. ಎನ್‌ಡಿಎ ಭಾಗವಾಗಿ ಒಂದೊಮ್ಮೆ ರಾಷ್ಟೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಸ್ಪರ್ಧಿಸಲು ಬಯಸಿದರೆ ಅದಕ್ಕೆ ಎರಡು ಸೀಟುಗಳನ್ನು ಬಿಜೆಪಿ ಕೋಟಾದಿಂದ ಕೊಡುವುದೆಂದು ತೀರ್ಮಾನಿಸಲಾಗಿತ್ತು.
ಆದರೆ ಸೀಟು ಹಂಚಿಕೆ ತೀರ್ಮಾನಕ್ಕೆ ಮೊದಲು ಬಿಹಾರದಲ್ಲಿ ಎನ್‌ಡಿಎ ಮತ್ತು ಜೆಡಿಯು ಸಮಾನ ಸಂಖ್ಯೆಯಲ್ಲಿ (20 : 20) ಸೀಟು ಹಂಚಿಕೊಳ್ಳಲಿವೆ ಎಂದು ತಿಳಯಲಾಗಿತ್ತು. ಆದರೆ ಅದೀಗ 20 : 12ಕ್ಕೆ ಬಂಧಿರುವುದು ನಿತೀಶ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
ಇದರ ಪರಿಣಾಮವಾಗಿ ನೀತಿಶ್ 2019ರ ಜನವರಿಯಲ್ಲಿ ಎನ್‌ಡಿಎ ಕೂಟದಿಂದ ಹೊರಬರಲಿದೆ ಎಂಧು ಹೇಳಲಾಗುತ್ತಿದೆ. ಮಾತ್ರವಲ್ಲದೆ ಜೆಡಿಯು ಮತ್ತೆ ಮಹಾ ಘಟಬಂಧನವನ್ನು ಸೇರಿಕೊಳ್ಳಲಿದೆ ಎಂದೂ ಹೇಳಲಾಗುತ್ತಿದೆ.