ಪಟ್ನಾ : ಬಿಹಾರದ ಮಹಾ ಘಟಬಂಧನದಲ್ಲಿನ ಬಿರುಕು ಇನ್ನಷ್ಟು ಉದ್ದಗಲ-ಆಳವನ್ನು ಕಾಣುತ್ತಿರುವುದರ ಸೂಚನೆ ಎಂಬಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಭ್ರಷ್ಟಾಚಾರ ಕಳಂಕಿತ ಉಪ ಮುಖ್ಯಮಂತ್ರಿಯಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಅವರು ಕಳಂಕ ಮುಕ್ತರಾಗಿ ಬಾರದೇ ಹೋದಲ್ಲಿ, ಹೊಸದಾಗಿ ಜನಾದೇಶ ಪಡೆಯಲು ಸಿದ್ಧರಿರುವುದಾಗಿ ತಿಳಿದು ಬಂದಿದೆ.
ಹೊಸದಾಗಿ ಜನಾದೇಶ ಪಡೆಯವ ಕುರಿತ ತಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ಚುನಾವಣೆಯ ಬಳಿಕ ತೆಗೆದುಕೊಳ್ಳಲಿದ್ದಾರೆ ಎಂದು ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.
ಭ್ರಷ್ಟಾಚಾರ ಕಳಂಕಿತ ತೇಜಸ್ವಿ ಯಾದವ್ ಅವರು ರಾಜೀನಾಮೆ ನೀಡುವ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತುಟಿ ಬಿಚ್ಚದಿರುವುದರಿಂದ ತಮ್ಮ ಹಾಲಿ ಸರಕಾರವನ್ನು ಬರ್ಖಾಸ್ತುಗೊಳಿಸುವ ತ್ಯಾಗಕ್ಕೆ ಸಿದ್ಧರಾಗಿ ಹೊಸದಾಗಿ ಜನಾದೇಶವನ್ನು ಪಡೆಯುವ ನಿರ್ಧಾರವನ್ನು ನಿತೀಶ್ ಕುಮಾರ್ ಕೈಗೊಳ್ಳಲಿದ್ದಾರೆ ಎಂದು ನ್ಯೂಸ್ 18 ಡಾಟ್ ಕಾಮ್ ಹೇಳಿದೆ.
ಭ್ರಷ್ಟಾಚಾರ ಕಳಂಕಿತ ತೇಜಸ್ವಿ ಯಾದವ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕುವುದಕ್ಕೆ ನಿತೀಶ್ ಅವರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅದು ಹೇಳಿದೆ.
ನಿತೀಶ್ ಕುಮಾರ್ ಯಾದವ್ ಅವರು ತೇಜಸ್ವಿ ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಕಠಿನಗೊಳಿಸುತ್ತಿರುವ ಕಾರಣ ಲಾಲು ಪ್ರಸಾದ್ ಯಾದವ್ ಅವರು ಮಹಾ ಘಟಬಂಧನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಕ್ರಮ ತೆಗೆದುಕೊಳ್ಳುವ ಸುಳಿವು ನೀಡಿರುವುದಾಗಿಯೂ ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.
ರಾಷ್ಟ್ರಪತಿ ಚುನಾವಣೆಗೆ ಮುನ್ನವೇ ತೇಜಸ್ವಿ ವಿರುದ್ಧ ಕ್ರಮಕೈಗೊಂಡಲ್ಲಿ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಯನ್ನು ಕಾಂಗ್ರೆಸ್ ಮತ್ತು ಆರ್‌ಜೆಡಿ ಮುಂದಾಗಿ ಕಂಡಿರುವ ಕಾರಣ ಅಲ್ಲಿಯ ವರೆಗೂ ಸುಮ್ಮನಿರಲು ನಿರ್ಧರಿಸಿವೆ ಎಂದೂ ವರದಿ ಹೇಳಿದೆ.