Advertisement

ಮುಖ್ಯಮಂತ್ರಿಸ್ಥಾನಕ್ಕೆ ನಿತೀಶ್‌ ರಾಜೀನಾಮೆ:ಮುರಿದುಬಿತ್ತು ಮಹಾಮೈತ್ರಿ

07:09 PM Jul 26, 2017 | Team Udayavani |

ಪಾಟ್ನಾ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬುಧವಾರದಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

Advertisement

ಈ ಮೂಲಕ ಕಳೆದ 20 ತಿಂಗಳುಗಳ ಹಿಂದೆ ಬಿಹಾರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಜೆಡಿಯು-ಆರ್‌.ಜೆ.ಡಿ. -ಕಾಂಗ್ರೆಸ್‌ ಮಹಾಮೈತ್ರಿಕೂಟ ಬಿರುಕು ಬಿಟ್ಟಿದೆ.

ಬಿಹಾರ ಉಪಮುಖ್ಯಮಂತ್ರಿ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಅವರ ಪುತ್ರ ತೇಜಸ್ವಿ ಯಾದವ್‌ ವಿರುದ್ಧದ ಭೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇತ್ತೀಚೆಗಷ್ಟೆ ಅವರ ಮೇಲೆ ಎಫ್.ಐ.ಆರ್‌. ದಾಖಲಿಸಿತ್ತು. ಆವತ್ತಿನಿಂದ ನಿತೀಶ್‌ ಕುಮಾರ್‌ ಅವರು ತೇಜಸ್ವಿ ರಾಜೀನಾಮೆಗೆ ಪಟ್ಟು ಹಿಡಿದು ಕೂತಿದ್ದರು.

ಆದರೆ ಆರ್‌.ಜೆ.ಡಿ. ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರು ನಿತೀಶ್‌ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ. ಮತ್ತು ಈ ಕುರಿತಾಗಿ ಬುಧವಾರ ಬೆಳಗ್ಗೆಯಷ್ಟೆ ಲಾಲೂ ಅವರು ತಮ್ಮ ಪುತ್ರ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಬುಧವಾರ ಸಾಯಂಕಾಲದಂದು ನಿತೀಶ್‌ ಕುಮಾರ್‌ ಅವರು ಹಠಾತ್ತಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಬಿಹಾರ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟದಲ್ಲೂ ಇದು ಮಹಾ ಸಂಚಲನಕ್ಕೆ ಕಾರಣವಾಗಿದೆ.

Advertisement

ಈ ಮೈತ್ರಿಕೂಟವನ್ನು ಉಳಿಸಿಕೊಳ್ಳುವಲ್ಲಿ ನಾನು ಕೊನೆಯ ಹಂತದವರೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ, ಆದರೆ ಕೊನೆಯಲ್ಲಿ ನನಗೆ ರಾಜೀನಾಮೆ ನೀಡದೆ ಬೇರೆ ಮಾರ್ಗವೇ ಇರಲಿಲ್ಲ. ಬಿಹಾರದ ಜನತೆಯ ಸೇವೆಗೆ ನಾನು ಈಗಲೂ ಬದ್ಧನಾಗಿದ್ದೇನೆ, ಆದರೆ ಪ್ರಸಕ್ತ ಸನ್ನಿವೇಶದಲ್ಲಿ ನಾನು ಜನರ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲವಾಗಿದ್ದರಿಂದ ರಾಜೀನಾಮೆಯನ್ನು ನೀಡುವುದು ಅನಿವಾರ್ಯವಾಯಿತು ಎಂಬುದಾಗಿ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಬಳಿಕ ನಿತೀಶ್‌ ಪ್ರತಿಕ್ರಿಯೆ ನೀಡಿದ್ದಾರೆ.

Read this in English: Nitish Kumar resigns as Bihar CM: //bit.ly/2vIiiLp

Advertisement

Udayavani is now on Telegram. Click here to join our channel and stay updated with the latest news.

Next