Advertisement

Bihar: ನಿತೀಶ್‌ ಕುಮಾರ್‌ಗೂ ಪಕ್ಷ ಒಡೆದುಹೋಗುವ ಭೀತಿ?!

11:54 PM Jul 05, 2023 | Team Udayavani |

ಪಟ್ನಾ: 17 ಪಕ್ಷಗಳ ನೂತನ ಮೈತ್ರಿಕೂಟ ರಚನೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಲವಾದ ಶ್ರಮ ಹಾಕುತ್ತಿದ್ದಾರೆ. ವಿಚಿತ್ರವೆಂದರೆ ಸ್ವತಃ ನಿತೀಶ್‌ ಮತ್ತೆ ಎನ್‌ಡಿಎ ಒಕ್ಕೂಟವನ್ನು ಕೂಡಿಕೊಳ್ಳಬಹುದು ವದಂತಿಗಳು ಹರಡಿವೆ! ಅದಕ್ಕೆ ಕಾರಣ ರಾಜ್ಯಸಭಾ ಉಪ ಸಭಾಪತಿ, ಜೆಡಿಯು ನಾಯಕ ಹರಿವಂಶ್‌ರನ್ನು ನಿತೀಶ್‌ ದಿಢೀರ್‌ ಭೇಟಿಯಾಗಿದ್ದು. ಒಂದೂವರೆ ಗಂಟೆಗಳ ಕಾಲ ಹರಿವಂಶ್‌ ಅವರ ಕಚೇರಿಯಲ್ಲಿದ್ದರು. ಇದು ಕೇವಲ ಸೌಜನ್ಯದ ಭೇಟಿ ಮಾತ್ರ ಎಂದು ಹರಿವಂಶ್‌ ಅವರ ಕಚೇರಿ ಹೇಳಿಕೊಂಡಿದೆ.

Advertisement

ಆದರೆ ಮೂಲಗಳ ವಿಶ್ಲೇಷಣೆಯೇ ಬೇರೆಯಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎನ್‌ಡಿಎ ಸಖ್ಯವನ್ನು ತೊರೆದಿದ್ದ ನಿತೀಶ್‌ ಕುಮಾರ್‌ ಆರ್‌ಜೆಡಿ ಜತೆ ಸೇರಿ ಸರಕಾರ ರಚಿಸಿದ್ದರು. ಅದಾದ ಮೇಲೆ ಹರಿವಂಶ್‌ರೊಂದಿಗೆ ಮಾತುಕತೆಯನ್ನೇ ನಡೆಸಿರಲಿಲ್ಲ. ಇದೀಗ ದಿಢೀರ್‌ ಭೇಟಿ ಮಾಡಿದ್ದಾರೆ! ಇದು ನಿತೀಶ್‌ ಮತ್ತೆ ಎನ್‌ಡಿಎ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಲು ಕಾರಣ.

ಇನ್ನೂ ವಿಶೇಷವೆಂದರೆ ಹರಿವಂಶ್‌ ಜೆಡಿಯು ನಾಯಕನಾದರೂ ರಾಜ್ಯಸಭಾ ಉಪಸಭಾಪತಿ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದು ಸ್ವತಃ ನಿತೀಶ್‌ ಅವರದ್ದೇ ತಂತ್ರ. ಅಗತ್ಯ ಬಿದ್ದಾಗ ಬಿಜೆಪಿ ಜತೆಗೆ ಮಾತುಕತೆ ನಡೆಸಲು ಹರಿವಂಶ್‌ರನ್ನು ಅದೇ ಸ್ಥಾನದಲ್ಲಿ ಮುಂದುವರಿಯುವಂತೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ನಿತೀಶ್‌ಗೂ ಪಕ್ಷ ಒಡೆಯುವ ಭೀತಿ?: ಬಿಹಾರದಲ್ಲಿ ಕಳೆದ ಐದು ದಿನಗಳಿಂದ ನಿತೀಶ್‌ ಕುಮಾರ್‌ ತಮ್ಮ ಪಕ್ಷದ ಶಾಸಕರು, ಸಂಸದರ ಸಭೆ ನಡೆಸುತ್ತಿದ್ದಾರೆ. ಆರ್‌ಜೆಡಿ ಜತೆ ಸೇರಿ ಮಾಡುತ್ತಿರುವ ಸರಕಾರದ ಬಗ್ಗೆ ಶಾಸಕರ ಅಭಿಪ್ರಾಯವೇನು? 17 ಪಕ್ಷಗಳ ಮೈತ್ರಿಕೂಟದ ಬಗ್ಗೆ ಶಾಸಕರು ಸದ್ಯ ಮನಃಸ್ಥಿತಿ ಹೇಗಿದೆ? ಎಂದು ತಿಳಿದುಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ. ಇದಕ್ಕೂ ಕಾರಣವಿದೆ. ಕಳೆದ ವರ್ಷದ ಶಿವಸೇನೆ ಒಡೆದುಹೋಗಿ ಬಿಜೆಪಿ ಜತೆ ಸೇರಿತ್ತು. ಈ ಬಾರಿ ಎನ್‌ಸಿಪಿ ಒಡೆದುಹೋಗಿ ಬಿಜೆಪಿ ಜತೆ ಸೇರಿದೆ. ಹಾಗೆಯೇ ಜೆಡಿಯುನಲ್ಲೂ ಸಂಭವಿಸಬಹುದಾ? ಎಂಬ ಭೀತಿಯನ್ನು ನಿತೀಶ್‌ ಹೊಂದಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ನಿತೀಶ್‌ ಆರ್‌ಜೆಡಿ, ಕಾಂಗ್ರೆಸ್‌ ಜತೆ ಕೈಜೋಡಿಸಿರುವುದು ಪಕ್ಷದೊಳಗಿನ ಹಲವು ನಾಯ ಕರಿಗೆ ಅಸಮಾಧಾನ ತರಿಸಿದೆ. ಮೈತ್ರಿಕೂಟ ದಿಂದ ತಮಗೆ ಟಿಕೆಟ್‌ ಸಿಗದಿದ್ದರೆ ಎಂಬ ಆತಂಕ ಅವರದ್ದು. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆ ಯಲ್ಲಿ ರಾಹುಲ್‌ ಗಾಂಧಿ ಮತ್ತೆ ಕೇಂದ್ರಸ್ಥಾನಕ್ಕೆ ಬರುತ್ತಿ ದ್ದಾರೆ. ಇದು ಹಲವರಿಗೆ ಇಷ್ಟವಾಗಿಲ್ಲ, ಪಕ್ಷದೊಳಗೆ ಆಕ್ರೋಶ ಶುರುವಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಶರದ್‌ ಬೆಂಬಲದಿಂದಲೇ ಎನ್‌ಸಿಪಿ ಇಬ್ಭಾಗ: ರಾಜ್‌ ಠಾಕ್ರೆ
ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಕೃಪಾಕಟಾಕ್ಷದಿಂದಲೇ ಎನ್‌ಸಿಪಿ ಇಬ್ಭಾಗವಾಗಿರುವುದು ಎಂದು ಮಹಾರಾಷ್ಟ್ರ ನವನಿರ್ಮಾಣ್‌ ಸೇನೆ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ದೂರಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಮಹಾರಾಷ್ಟ್ರದಲ್ಲಿ ನಡೆದಿರುವುದು ಅಸಹ್ಯಕರ ಬೆಳವಣಿಗೆ. ಇದು ರಾಜ್ಯದ ಮತದಾರರಿಗೆ ಮಾಡಿದ ಘೋರ ಅಪಮಾನವಾಗಿದೆ’ ಎಂದರು.

“ಮಹಾರಾಷ್ಟ್ರ ರಾಜಕೀಯದಲ್ಲಿ ಈ ಅಸಹ್ಯ ಬೆಳವಣಿಗೆಯನ್ನು ಮೊದಲು ಆರಂಭಿಸಿದವರು ಶರದ್‌ ಪವಾರ್‌. 1978ರಲ್ಲಿ ಕಾಂಗ್ರೆಸ್‌ನ 38 ಶಾಸಕರೊಂದಿಗೆ ಪಕ್ಷ ಬಿಟ್ಟು, ಜನತಾ ಪಕ್ಷದ ಜತೆಗೆ ಕೈಜೋಡಿಸಿ, ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಈ ಎಲ್ಲ ಅಸಹ್ಯ ಪ್ರಾರಂಭಿಸಿದವರು ಶರದ್‌ ಪವಾರ್‌, ಅದನ್ನು ಕೊನೆಗೊಳಿಸಿದವರು ಕೂಡ ಅವರೇ’ ಎಂದು ವ್ಯಂಗ್ಯವಾಡಿದರು. “ಮಹಾರಾಷ್ಟ್ರದಲ್ಲಿನ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯ ಹಿಂದಿರುವುದು ಶರದ್‌ ಪವಾರ್‌. ಅವರ ಆಶೀರ್ವಾದವಿಲ್ಲದೇ ಪ್ರಫ‌ುಲ್‌ ಪಟೇಲ್‌, ದಿಲೀಪ್‌ ವಾಲ್ಸೆ ಮತ್ತು ಛಗನ್‌ ಭುಜಬಲ್‌ ಅವರು ಅಜಿತ್‌ ಪವಾರ್‌ ಜತೆ ಹೋಗಲು ಸಾಧ್ಯವಿಲ್ಲ’ ಎಂದು ರಾಜ್‌ ಠಾಕ್ರೆ ಪ್ರತಿಪಾದಿಸಿದರು.

ಅಜಿತ್‌ಗೆ 40 ಶಾಸಕರ ಬೆಂಬಲ: ಪ್ರಫ‌ುಲ್‌ ಪಟೇಲ್‌
“ಎನ್‌ಸಿಪಿ ಇಬ್ಭಾಗವಾಗಿಲ್ಲ. ಎನ್‌ಸಿಪಿಯ 53 ಶಾಸಕರ ಪೈಕಿ 40 ಶಾಸಕರ ಬೆಂಬಲ ಅಜಿತ್‌ಪವಾರ್‌ಗಿದೆ’ ಎಂದು ಎಸ್‌ಸಿಪಿ ಅಜಿತ್‌ ಪವಾರ್‌ ಬಣದ ಹಿರಿಯ ನಾಯಕ ಪ್ರಫ‌ುಲ್‌ ಪಟೇಲ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರ ಸರಕಾರದ ಭಾಗವಾಗಿರಬೇಕು ಎಂದು ಬಹಳ ಸಮಯದಿಂದ ಪಕ್ಷದಲ್ಲಿ ಚರ್ಚೆಗಳು ನಡೆದಿತ್ತು. ನಮ್ಮ ನಿರ್ಧಾರವನ್ನು ಬೆಂಬಲಿಸುವಂತೆ ಶರದ್‌ ಪವಾರ್‌ ಅಥವಾ ಸುಪ್ರಿಯಾ ಸುಳೆ ಅವರಿಗೆ ಮನವರಿಕೆ ಮಾಡಲು ನನಗೆ ಯಾವುದೇ ಮುಜುಗರವಿಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next