ಬಿಹಾರ: ನಕಲಿ ಮದ್ಯ ಸೇವಿಸಿ ಹದಿನೇಳು ಮಂದಿ ಸಾವನ್ನಪ್ಪಿದ್ದ ಕುರಿತು ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರತಿಭಟನೆಗೆ ಇಳಿದ ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಕೆಂಡಾಮಂಡಲರಾದ ಘಟನೆ ನಡೆದಿದೆ.
ಬಿಹಾರದಲ್ಲಿ ಬುಧವಾರ ನಕಲಿ ಮದ್ಯ ಸೇವಿಸಿ ಸುಮಾರು ಹದಿನೇಳು ಮಂದಿ ಸಾವನ್ನಪ್ಪಿದ್ದು ಈ ವಿಚಾರವಾಗಿ ಸರಕಾರ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ ಎಂದು ವಿಧಾನ ಸಭೆಯಲ್ಲಿ ಸದನದ ಬಾವಿಗಿಳಿದು ಬಿಜೆಪಿ ಶಾಸಕರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರತಿಭಣೆಗಿಳಿದಿದ್ದಾರೆ.
ಈ ವೇಳೆ ತಾಳ್ಮೆ ಕಳೆದುಕೊಂಡ ನಿತೀಶ್ ಕುಮಾರ್ ಏನಾಗಿದೆ ನಿಮಗೆ ? ಪ್ರತಿಭಟಿಸುವವರನ್ನು ಸದನದಿಂದ ಹೊರಗೆ ಹಾಕಿ… ನೀವು ಕುಡಿದಿದ್ದೀರಿ ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರ ಮೇಲೆ ಹರಿಹಾಯ್ದಿದ್ದಾರೆ. ಈ ಹೇಳಿಕೆಯಿಂದ ಕೋಪಗೊಂಡ ಬಿಜೆಪಿ ಶಾಸಕರು ಈ ಕೂಡಲೇ ನಿತೀಶ್ ಕುಮಾರ್ ಅವರು ಈ ಹೇಳಿಕೆಯನ್ನು ಹಿಂಪಡೆಯಬೇಕು ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.
ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ತೊರೆದು ವಿರೋಧ ಪಕ್ಷಗಳೊಂದಿಗೆ ಹೊಸ ಸರ್ಕಾರವನ್ನು ರಚಿಸಿದ ನಂತರ ಇದು ಎರಡನೇ ಬಿಹಾರ ವಿಧಾನಸಭೆ ಅಧಿವೇಶನವಾಗಿದೆ.
ಇದನ್ನೂ ಓದಿ: 2031ರ ವೇಳೆಗೆ ದೇಶದಲ್ಲಿ 20 ಹೊಸ ಪರಮಾಣು ಸ್ಥಾವರಗಳು ಆರಂಭ: ಸಚಿವ ಜಿತೇಂದ್ರ ಸಿಂಗ್