ಹೊಸದಿಲ್ಲಿ: ಯಾವುದೇ ಕಾರಣಕ್ಕೂ ಲಾಲು ಪ್ರಸಾದ್ ಅವರನ್ನು ಸಮರ್ಥಿಸಿಕೊಳ್ಳಬೇಡಿ ಎಂದು ಬಿಹಾರ ಸಿಎಂ ನಿತೀಶ್‌ಕುಮಾರ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಆಯೋಜಿಸಿರುವ ಔತಣಕೂಟ ಹಾಗೂ ರಾಷ್ಟ್ರಪತಿಯಾಗಿ ಕೋವಿಂದ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ದಿಲ್ಲಿಗೆ ಆಗಮಿಸಿರುವ ನಿತೀಶ್ ಅವರು, ಶನಿವಾರ ಸಂಜೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.
ಲಾಲು ಪುತ್ರ ತೇಜಸ್ವಿಯಾದವ್ ವಿರುದ್ಧದ ಅಕ್ರಮ ಆರೋಪ ಮತ್ತು ಎಫ್ಐಆರ್ ಸಲ್ಲಿಕೆ ಹಿನ್ನೆಲೆ ರಾಜೀನಾಮೆ ಕೊಡಬೇಕು ಎಂಬುದು ಜೆಡಿಯು ಆಗ್ರಹ. ಇದುವರೆಗೆ ನಿತೀಶ್ ಅವರು ಭ್ರಷ್ಟಾಚಾರ ವಿಚಾರದಲ್ಲಿ ರಾಜಿಯಾಗಿಲ್ಲ. ಹೀಗಾಗಿ ರಾಜೀನಾಮೆ ನೀಡಿದರೆ, ಅವರು ಮುಜುಗರದಿಂದ ತಪ್ಪಿಸಿಕೊಳ್ಳ ಬಹು ದು ಎಂದು ಜೆಡಿಯು ಹೇಳುತ್ತಿದೆ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ಸಾಧ್ಯವಿಲ್ಲ ಎಂದು ಸ್ವತಃ ಲಾಲು ಅವರೇ ಹೇಳಿರುವುದರಿಂದ ಬಿಹಾರದಲ್ಲಿರುವ ಮಹಾಘಟ ಬಂಧನ್ ಮುರಿದು ಬೀಳುವ ಹಂತಕ್ಕೆ ಬಂದಿದೆ. ಆದರೆ, ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಇವರಿಬ್ಬರ ಸಂಧಾನಕ್ಕೆ ಯತ್ನಿಸುತ್ತಿದ್ದು, ಇದರ ಅಂಗವಾಗಿಯೇ ರಾಹುಲ್ ಅವರು ನಿತೀಶ್ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಕೇವಲ ಎಫ್ಐಆರ್ ಸಲ್ಲಿಕೆಯಾದ ಮಾತ್ರಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ರಾಹುಲ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಹುಲ್-ನಿತೀಶ್ ಭೇಟಿಯನ್ನು ಸೌಜನ್ಯದ ಕರೆ ಎಂದು ಜೆಡಿಯು ಹೇಳಿದ್ದರೂ, ಈ ಭೇಟಿಯ ಉದ್ದೇಶ ಮಹಾಘಟಬಂಧನ್ ಕುರಿತಂತೆ ಮಾತನಾಡುವುದೇ ಆಗಿದೆ ಎಂದು ಹೇಳಲಾಗಿದೆ. ಜೆಡಿಯು ಸತತವಾಗಿ ರಾಜೀನಾಮೆಗೆ ಒತ್ತಡ ಹಾಕುತ್ತಿದ್ದರೂ ಕಾಂಗ್ರೆಸ್ ನಾಯಕತ್ವ ಲಾಲು ಅವರನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಈ ಬಗ್ಗೆ ಖಡಕ್ ಆಗಿ ಹೇಳುವ ಸಂಬಂಧವೇ ನಿತೀಶ್ ಅವರು ರಾಹುಲ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕಳಂಕಿತರಾಗಿರುವ ಲಾಲು ಕುಟುಂಬವನ್ನು ಸಮರ್ಥಿಸಿಕೊಳ್ಳಬೇಡಿ ಎಂದು ರಾಹುಲ್‌ಗೆ ಸಲಹೆ ನೀಡಿದ್ದಾರೆ. ಅಲ್ಲದೆ ಯುಪಿಎ 2ರ ಅವಧಿಯಲ್ಲಿ ಕಳಂಕಿತರನ್ನು ಅನರ್ಹಗೊಳಿಸುವುದು ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಸಲು ವಾಗಿ ಕೇಂದ್ರ ಸರಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಅವರೇ ಹರಿದುಹಾಕಿದ್ದ ಘಟನೆಯನ್ನೂ ನಿತೀಶ್ ನೆನಪಿಸಿದ್ದಾರೆ. ಏಕೆಂದರೆ, ಆಗ ಲಾಲು ಸಂಸದ ಸ್ಥಾನ ಕಳೆದುಕೊಂಡಿದ್ದರು. ಇವರನ್ನು ರಕ್ಷಿಸಲೆಂದೇ ಸುಗ್ರೀವಾಜ್ಞೆ ಜಾರಿಗೆ ತಂದಿತ್ತು ಎಂದು ಹೇಳಲಾಗಿತ್ತು.
ಆದರೆ ಇದಕ್ಕೆ ಉತ್ತರಿಸಿರುವ ರಾಹುಲ್ ಅವರು, ತೇಜಸ್ವಿಯಾದವ್ ವಿರುದ್ಧ ಕೇವಲ ಎಫ್ಐಆರ್ ದಾಖಲಾಗಿದೆ. ಅಲ್ಲದೆ ಬಿಜೆಪಿಯ ಉಮಾಭಾರತಿ, ಕೇಶವ್ ಮೌರ್ಯ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಅವರು ರಾಜೀನಾಮೆ ಕೊಟ್ಟಿಲ್ಲ. ಹೀಗಾಗಿ ತೇಜಸ್ವಿ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಜತೆ ನಿತೀಶ್ ಔತಣ: ಸೋಮವಾರ ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಲಿರುವ ಪ್ರಣವ್ ಮುಖರ್ಜಿ ಅವರ ಗೌರವಾರ್ಥ ಪ್ರಧಾನಿ ಮೋದಿ ಅವರು ಶನಿವಾರ ಆಯೋಜಿಸಿದ್ದ ಔತಣಕೂಟದಲ್ಲಿ ನಿತೀಶ್ ಭಾಗಿಯಾದರು. ಪ್ರಧಾನಿ ನಿವಾಸದಲ್ಲೇ ರಾತ್ರಿ ಔತಣಕೂಟ ನಡೆಯಿತು.