ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲೂಕಿನ ಪ್ರಸಿದ್ಧ ದೇವಲ್ ಗಾಣಗಾಪುರದ ದತ್ತ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದು ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲು ಬಂದಿದ್ದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಮಾನ ನಿಲ್ದಾಣದಲ್ಲಿ ಒಂದು ಕಪ್ ಚಹಾಕ್ಕಾಗಿ ಪರದಾಡಿದ ಪ್ರಸಂಗ ನಡೆದಿದೆ.
ಸೋಮವಾರ ಮಧ್ಯಾಹ್ನ ದೇವಲ್ ಗಾಣಗಾಪುರದಿಂದ ಹೆಲಿಕಾಪ್ಟರ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗಡ್ಕರಿ ಅವರು ನಿಲ್ದಾಣದ ವಿಐಪಿ ಲಾಂಜ್ ನಲ್ಲಿ ಕುಳಿತುಕೊಂಡು ಚಹಾ ನೀಡುವಂತೆ ಸೂಚನೆ ನೀಡಿದರಲ್ಲದೇ ಒಂದಲ್ಲ ಎರಡು ಸಲ ಚಹಾ ನೀಡುವಂತೆ ಕೋರಿದರು.
ಕೇಂದ್ರದ ಸಚಿವರಿಗೆ ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣದ ಅಧಿಕಾರಿಗಳು ಚಹಾ, ಉಪಾಹಾರದ ವ್ಯವಸ್ಥೆ ಮಾಡಬೇಕಿತ್ತು. ಆಶ್ಚರ್ಯವೆನಂದರೆ ಚಹಾ ಕೂಡಾ ತರಿಸಿರಲಿಲ್ಲ. ಪ್ರಮುಖವಾಗಿ ಸಚಿವರು ಸೇವಿಸುವ ಚಹಾ, ಉಪಾಹಾರವನ್ನು ಮುಂಚೆಯೇ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮಾಡಬೇಕಿತ್ತು. ಆಶ್ಚರ್ಯಕರ ಸಂಗತಿವೆನಂದರೆ ಸುರಕ್ಷತಾ ಅಧಿಕಾರಿ ಅವರಿಗೂ ವಿಮಾನದ ನಿಲ್ದಾಣದ ಹೊಣೆ ಹೊತ್ತ ಕರ್ನಾಟಕ ಕೈಗಾರಿಕೆ ಭದ್ರತಾ ಕಡೆಯ ಪೊಲೀಸ್ ಇನ್ ಸ್ಪೆಕ್ಟರ್ ನಿಲ್ದಾಣದ ಒಳಗೆ ಅವಕಾಶ ಸಹ ನೀಡಿರಲಿಲ್ಲ.
ಸಚಿವರು ಎರಡು ಸಲ ಚಹಾ ಬರುವುದು ತಡವಾಗುತ್ತದೆಯೇ ಎಂದು ಅವರನ್ನು ಸ್ವಾಗತಿಸಲು ಬಂದಿದ್ದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರನ್ನು ಪ್ರಶ್ನಿಸಿದರು. ಆಗ ಪಾಟೀಲ ಅವರು ಹೊರಗಡೆ ಬಂದು ಚಹಾ ಸಿಗುತ್ತದೆಯೇ ಎಂದು ಕೇಳಿದರು. ಇದರಿಂದ ಗಲಿಬಿಲಿಗೊಂಡ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಹೊರಗಿನ ಕ್ಯಾಂಟೀನ್ ನಿಂದ ತರಿಸಬೇಕು ಎಂದರು. ನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಕ್ಯಾಂಟೀನ್ ಗೆ ತೆರಳಿ ಚಹಾ ತಂದುಕೊಟ್ಟರು.
ಇದನ್ನೂ ಓದಿ : ಕೊಡಗಿನ ಜಲಪಾತದಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು
‘ಕೇಂದ್ರ ಸಚಿವರಂತಹ ಗಣ್ಯ ವ್ಯಕ್ತಿಗಳು ಬಂದಾಗ ಆಹಾರ ತಪಾಸಣೆ ಮಾಡಿದ ಬಳಿಕ ಕೊಡಬೇಕು. ನೇರವಾಗಿ ಕೊಡುವಂತಿಲ್ಲ. ಆದರೆ ನಮಗೆ ಒಳಗೆ ಪ್ರವೇಶ ನೀಡದ್ದರಿಂದ ತಪಾಸಣೆ ಸಾಧ್ಯವಾಗಲಿಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದರು.
ಸಂಸದ ಜಾಧವ್ ತರಾಟೆಗೆ: ಸಚಿವರು ಬಂದಾಗ ಶಿಷ್ಟಾಚಾರ ಉಲ್ಲಂಘನೆಯಾದ ಬಗ್ಗೆ ಮಾಹಿತಿ ಪಡೆದ ಸಂಸದ ಡಾ.ಉಮೇಶ ಜಾಧವ್ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ ರಾವ್ ಹಾಗೂ ಭದ್ರತಾ ಅಧಿಕಾರಿ ನೂರ್ ಮರಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
‘ಸಕಾಲಕ್ಕೆ ಚಹಾವನ್ನೂ ಕೊಡದಿದ್ದರೆ ಕರ್ನಾಟಕದ ಬಗ್ಗೆ ಸಚಿವರು ಏನು ತಿಳಿದುಕೊಳ್ಳುತ್ತಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಿ’ ಎಂದು ತಾಕೀತು ಮಾಡಿದರು. ಒಟ್ಟಾರೆ ಕೇಂದ್ರದ ಸಚಿವರಿಗೆ ಚಹಾದ ವ್ಯವಸ್ಥೆ ಕಲ್ಪಿಸುವಲ್ಲಿ ಲೋಪವಾಗಿರುವುದಂತು ನಿಶ್ಚಿತ.