Advertisement

ಎಲ್ಲ ರೀತಿಯ ಅಡುಗೆ ಇಂಧನಕ್ಕೂ ಸಬ್ಸಿಡಿ ಬೇಕು

10:20 AM Jul 16, 2018 | Karthik A |

ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್‌ ಗೆ (LPG) ನೀಡುವ ಸಬ್ಸಿಡಿ ಸದ್ಯದಲ್ಲೇ ‘ಅಡುಗೆ ಸಬ್ಸಿಡಿ’ ಎಂದು ಬದಲಾಗುವ ಸಾಧ್ಯತೆಯಿದೆ. ಕೊಳವೆ ಮೂಲಕ ಸರಬರಾಜು ಆಗುವ ನೈಸರ್ಗಿಕ ಅನಿಲ ಮತ್ತು ಜೈವಿಕ ಇಂಧನಗಳು ಸೇರಿದಂತೆ ಅಡುಗೆಯ ಉದ್ದೇಶಕ್ಕೆ ಬಳಸುವ ಇಂಧನಗಳನ್ನೂ ಸಹಾಯಧನದ ವ್ಯಾಪ್ತಿಗೆ ತರಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. LPGಗೆ ನೀಡಲಾಗುವ ಸಬ್ಸಿಡಿ ಹಂತ ಹಂತವಾಗಿ ತೆಗೆದು ಹಾಕಬೇಕು ಎಂದು ಕೇಂದ್ರ ಸರಕಾರದ ಬಯಸುತ್ತಿರುವಾಗಲೇ ನೀತಿ ಆಯೋಗದ ಉಪಾಧ್ಯಕ್ಷರು ಈ ಸಲಹೆ ನೀಡಿರುವುದು ಮಹತ್ವ ಪಡೆದಿದೆ.

Advertisement

‘ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು, ಸದ್ಯ ಸಬ್ಸಿಡಿ ನೀಡಿಕೆ ಎಂದರೆ ಕೇವಲ LPG ಸಿಲಿಂಡರ್‌ ಗೆ ಮಾತ್ರ. ಕೆಲವು ನಗರ ಮತ್ತು ಪಟ್ಟಣಗಳಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ ಮತ್ತು ಜೈವಿಕ ಇಂಧನಗಳನ್ನು ಪೂರೈಕೆ ಮಾಡುವ ವ್ಯವಸ್ಥೆ ಇದೆ. ಅಡುಗೆಗಾಗಿ ಬಳಕೆ ಮಾಡುವ ಎಲ್ಲಾ ಇಂಧನಗಳಿಗೂ ಸಬ್ಸಿಡಿ ಸಿಗಬೇಕು’ಎಂದಿದ್ದಾರೆ. ಅಡುಗೆ ಸಹಾಯಧನ ಎಂಬ ವಿಚಾರವನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವ ‘ರಾಷ್ಟ್ರೀಯ ಇಂಧನ ನೀತಿ 2030’ರ ಕರಡಿನಲ್ಲಿ  ಸೇರ್ಪಡೆ ಮಾಡಲಾಗುತ್ತದೆ ಎಂದಿದ್ದಾರೆ. 

ಅಮರ್ತ್ಯ ಸೇನ್‌ ಭಾರತದಲ್ಲಿ ಸ್ವಲ್ಪ ಕಾಲ ವಾಸಿಸಲಿ
ದೇಶದ ಆರ್ಥಿಕತೆ 2014ಕ್ಕಿಂತ ಹಿಂದಿನ ಪರಿಸ್ಥಿತಿಯನ್ನು ತಲುಪಿದೆ ಎಂಬ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಹೇಳಿಕೆಯನ್ನು ಖಂಡಿಸಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ನರೇಂದ್ರ ಮೋದಿ ಸರಕಾರ ದೇಶದಲ್ಲಿ ಕೈಗೊಂಡಿರುವ ಮೂಲಭೂತ ಸುಧಾರಣೆಗಳನ್ನು ನೋಡಲು ದೇಶದಲ್ಲಿ ಸ್ವಲ್ಪ ಕಾಲ ವಾಸಿಸಬೇಕಿದೆ ಎಂದಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಅವರು ಸರಕಾರ ಕೈಗೊಂಡಿರುವ ಕ್ರಮಗಳನ್ನು ವಿಮರ್ಶಿಸಬೇಕಿದೆ. ದೇಶವನ್ನು ಸ್ವತ್ಛವಾಗಿಸಲು ಹಾಗೂ ಆರ್ಥಿಕತೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಇದೇ ಪ್ರಮಾಣದಲ್ಲಿ ಯಾವ ಸರಕಾರ ಶ್ರಮಿಸಿದೆ ಎಂದು ನನಗೆ ತೋರಿಸಲಿ ಎಂದು ಸವಾಲನ್ನೂ ರಾಜೀವ್‌ ಕುಮಾರ್‌ ಹಾಕಿದ್ದಾರೆ.

ಏನಿದು ಸಬ್ಸಿಡಿ?
– ಸದ್ಯ ಅಡುಗೆ ಅನಿಲ ಸಹಾಯ ಧನ ವ್ಯಾಪ್ತಿಯಲ್ಲಿ LPG ಸಿಲಿಂಡರ್‌ ಮಾತ್ರ
– ಶೀಘ್ರ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಕೊಳವೆ ಮೂಲಕ ಅನಿಲ ಪೂರೈಕೆ ಮಾಡುವ ವ್ಯವಸ್ಥೆ ಬರಲಿದೆ
– ಆಗ ಪೈಪ್‌ ಲೈನ್‌ ಮೂಲಕ ಬರುವ ಇಂಧನ ಹಾಗೂ ಇತರೆ ಜೈವಿಕ ಇಂಧನಗಳನ್ನೂ ಸಬ್ಸಿಡಿ ವ್ಯಾಪ್ತಿಗೆ ತರುವ ಚಿಂತನೆಯಿದೆ

Advertisement

Udayavani is now on Telegram. Click here to join our channel and stay updated with the latest news.

Next