ಬೆಂಗಳೂರು: ಮೂರು ವರ್ಷಗಳ ಹಿಂದೆ ಬಿಡದಿಯ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಭಕ್ತೆ ಸಂಗೀತಾ ಅಲಿಯಾಸ್ ನಿತ್ಯಾ ತುರಿಯಾತೀತಾನಂದ ಸ್ವಾಮಿನಿ ಸಾವಿನ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸದ ಪೊಲೀಸರ ಕ್ರಮದ ಬಗ್ಗೆ ಅನುಮಾನ ವ್ಯಕ್ತಡಿಸಿರುವ ಹೈಕೋರ್ಟ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ಒಪ್ಪಿಸಬಾರದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಪುತ್ರಿ ಸಂಗೀತಾ ಸಾವಿನ ಕುರಿತು ಸಿಬಿಐ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಆಕೆಯ ತಾಯಿ ಝಾನ್ಸಿ ಅವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪುತ್ರಿ ಮೃತಪಟ್ಟ ಬಗ್ಗೆ ತನಿಖೆ ನಡೆಸುವಂತೆ ಕೋರಿ ದೂರು ನೀಡಿದರೂ, ಈ ಕುರಿತು ಯಾಕೆ ಎಫ್ಐಆರ್ ದಾಖಲಿಸಿಲ್ಲ? ಅನುಮಾನದಿಂದ ಕೂಡಿದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಾರದೇಕೆ ಎಂದು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ನ್ಯಾಯಪೀಠದ ಪ್ರಶ್ನೆಗಳಿಗೆ ಉತ್ತರಿಸಿದ ಎಎಜಿ ಪೊನ್ನಣ್ಣ, ಸಂಗೀತಾ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಎರಡು ಬಾರಿ ನಡೆಸಿದ ಶವಪರೀಕ್ಷೆ ವರದಿಯಲ್ಲಿ ಉಲ್ಲೇಖವಿದೆ. ವೈದ್ಯರು ದೃಢೀಕರಿಸಿದ್ದಾರೆ. ಹಾಗಾಗಿ ಈ ಸಾವಿನ ಬಗ್ಗೆ ಅನುಮಾನ ಪಡುವಂತಹದ್ದೇನಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ, ನಿಮ್ಮ ಆಕ್ಷೇಪಣೆಗಳೇನಿದ್ದರೂ ಪ್ರಮಾಣ ಪತ್ರ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕೆಂದು ಸೂಚಿಸಿ ಜೂನ್ 11ಕ್ಕೆ ವಿಚಾರಣೆ ಮುಂದೂಡಿತು.
ಪ್ರಕರಣ ಏನು?: 2010ರಲ್ಲಿ ನಿತ್ಯಾನಂದ ಸ್ವಾಮೀಜಿಯಿಂದ ಸನ್ಯಾಸ ದೀಕ್ಷೆ ಪಡೆದಿದ್ದ ನಿತ್ಯಾ ತುರಿಯಾತೀತಾನಂದ ಸ್ವಾಮಿನಿಯಾಗಿ ಹೆಸರು ಬದಲಿಸಿಕೊಂಡಿದ್ದ ಸಂಗೀತಾ ಆಶ್ರಮದಲ್ಲಿಯೇ ನೆಲೆಸಿದ್ದರು. ಏತನ್ಮಧ್ಯೆ 2014ರ ಡಿ. 28ರಂದು ಸಂಗೀತಾ ಆಶ್ರಮದಲ್ಲಿ ನಿಗೂಢರೀತಿಯಲ್ಲಿ ಮೃತಪಟ್ಟಿದ್ದರು.
ಮಗಳ ಸಾವಿನ ತನಿಖೆ ನಡೆಸುವಂತೆ ಕೋರಿ ಝಾನ್ಸಿ ಅವರು ಸಲ್ಲಿಸಿದ್ದ ದೂರಿನ ಅನ್ವಯ, ಕೇಂದ್ರ ವಲಯ ಐಜಿಪಿ, ಸಂಗೀತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾಬೀತಾಗಿದೆ ಎಂದು ಹಿಂಬರಹ ನೀಡಿದ್ದರು. ತನಿಖೆ ಸೂಕ್ತರೀತಿ ನಡೆದಿಲ್ಲ ಎಂದು ಪ್ರಕಣ ಸಿಬಿಐ ತನಿಖೆ ಕೊಡಬೇಕೆಂದು ಝಾನ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.