Advertisement

ಶೌಚಾಲಯ ಇದ್ದರಷ್ಟೇ ಚುನಾವಣೆ ಸ್ಪರ್ಧೆಗೆ ಅವಕಾಶ

04:08 PM Dec 06, 2020 | Adarsha |

ಧಾರವಾಡ: ಜಿಲ್ಲೆಯ 7 ತಾಲೂಕುಗಳ 144 ಗ್ರಾಪಂಗಳ ಪೈಕಿ ಡಿಸೆಂಬರ್‌-2020ಕ್ಕೆ ಅವಧಿ ಮುಗಿಯುವ 8 ಗ್ರಾಪಂ ಹೊರತುಪಡಿಸಿ, 136 ಗ್ರಾಪಂಗಳಿಗೆ ಡಿ. 30ರಂದು ಸಾರ್ವತ್ರಿಕ ಚುನಾವಣೆ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ಜರುಗಿಸಲಾಗುವುದು. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸೋಮವಾರ ಅಂದರೆ ಡಿ. 7ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದೆ.

ಇದನ್ನೂ ಓದಿ:ಬಾಲಕಿ ಹತ್ಯೆ ಖಂಡಿಸಿ ಪ್ರತಿಭಟನೆ

ಮೊದಲನೇ ಹಂತದಲ್ಲಿ ಧಾರವಾಡ ತಾಲೂಕಿನ 34 ಗ್ರಾಪಂಗಳಲ್ಲಿ 241 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಂತೆ ಹುಬ್ಬಳ್ಳಿ ತಾಲೂಕಿನ 26 ಗ್ರಾಪಂಗಳ-162, ಅಳ್ನಾವರ ತಾಲೂಕಿನ 4 ಗ್ರಾಪಂಗಳ-21 ಮತಗಟ್ಟೆಗಳು, ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕುಂದಗೋಳ ತಾಲೂಕಿನ 23 ಗ್ರಾಪಂಗಳ ವ್ಯಾಪ್ತಿಯಲ್ಲಿ 166 ಮತಗಟ್ಟೆಗಳು, ಕಲಘಟಗಿ ತಾಲೂಕಿನ 27 ಗ್ರಾಪಂಗಳ-157, ನವಲಗುಂದ ತಾಲೂಕಿನ 14 ಗ್ರಾಪಂಗಳ-91  ಹಾಗೂ ಅಣ್ಣಿಗೇರಿ ತಾಲೂಕಿನ 8 ಗ್ರಾಪಂಗಳಲ್ಲಿ 50 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಪಾಟೀಲ ಹೇಳಿದರು.

ಶೌಚಾಲಯ ಕಡ್ಡಾಯ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರವನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅಭ್ಯರ್ಥಿಯು ಶೌಚಾಲಯ ಹೊಂದಿರುವ ಕುರಿತು ಪ್ರಮಾಣ ಪತ್ರ ಅಥವಾ ಮುಂದಿನ ಒಂದು ವರ್ಷದಲ್ಲಿ ಶೌಚಾಲಯ ಹೊಂದುವ ಕುರಿತು ಮುಚ್ಚಳಿಕೆ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ ಎಂದು ಡಿಸಿ ಹೇಳಿದರು.

Advertisement

ಅಧಿಕಾರಿಗಳ ನೇಮಕ: ಚುನಾವಣೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾಮಟ್ಟದ ಅಧಿ ಕಾರಿಗಳನ್ನು ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್‌ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 136 ಗ್ರಾಪಂಗಳ ಪೈಕಿ 20 ಏಕಸದಸ್ಯ ಕ್ಷೇತ್ರಗಳು, 378 ದ್ವಿಸದಸ್ಯ, 945 ತ್ರಿಸದಸ್ಯ ಕ್ಷೇತ್ರಗಳು, 604 ನಾಲ್ವರು ಸದಸ್ಯರು, ಐದಕ್ಕಿಂತ ಹೆಚ್ಚು ಸದಸ್ಯರು ಇರುವ 5 ಕ್ಷೇತ್ರಗಳು ಸೇರಿದಂತೆ ಒಟ್ಟು 1952 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

– ಚುನಾವಣೆಗೆ ಸಂಬಂಧಿಸಿ ಅಗತ್ಯ ಸಿಬ್ಬಂದಿ ನೇಮಿಸಿ ಬಂದೋಬಸ್ತ್ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಗತ್ಯ ಬಂದೋಬಸ್ತ್ ಮಾಡಲಾಗುವುದು. ಮದ್ಯ ಅಕ್ರಮ ಸಾಗಾಟ-ಮಾರಾಟ ಕುರಿತು ದೂರುಗಳು ಬಂದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಪಿ. ಕೃಷ್ಣಕಾಂತ, ಎಸಿ

 

 

Advertisement

Udayavani is now on Telegram. Click here to join our channel and stay updated with the latest news.

Next