Advertisement

ಅನೀಶ್‌ ಚಿತ್ರಕ್ಕೆ ನಿಶ್ವಿ‌ಕಾ ನಾಯಕಿ

11:21 AM May 10, 2017 | |

“ಕಾಲೇಜ್‌ ಕುಮಾರ್‌’ ಚಿತ್ರದವರೇನೋ ನಿರ್ಮಾಪಕರ ಸಂಘದವರೆಗೂ ಹೋಗಿ, ಸಂಯುಕ್ತಾ ಹೆಗ್ಡೆ ಅವರನ್ನು ತಮ್ಮ ಚಿತ್ರದ ನಾಯಕಿಯಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ಭಾಗ್ಯ “ವಾಸು – ಪಕ್ಕಾ ಕಮರ್ಷಿಯಲ್‌’ ಚಿತ್ರಕ್ಕೆ ಸಿಗಲಿಲ್ಲ. ಆ ಚಿತ್ರದಿಂದ ಸಂಯುಕ್ತಾ ಹೊರನಡೆದಿದ್ದು, ಅವರ ಜಾಗಕ್ಕೆ ನಿಶ್ವಿ‌ಕಾ ನಾಯ್ಡು ಎಂಬ ಹೊಸ ಹುಡುಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Advertisement

“ಕಿರಿಕ್‌ ಪಾರ್ಟಿ’ ಚಿತ್ರದ ನಂತರ ಸಂಯುಕ್ತಾ ಮೊದಲು ಒಪ್ಪಿದ್ದು “ವಾಸು – ಪಕ್ಕಾ ಕಮರ್ಷಿಯಲ್‌’ ಚಿತ್ರವನ್ನು ಅನೀಶ್‌ ತೇಜೇಶ್ವರ್‌ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿರುವ ಈ ಚಿತ್ರಕ್ಕೆ ಸಂಯುಕ್ತಾ ನಾಯಕಿಯಾಗಿ ಆಯ್ಕೆಯಾದರು. ಆ ನಂತರ ಸಂತು ನಿರ್ದೇಶನದ “ಕಾಲೇಜ್‌ ಕುಮಾರ್‌’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು.

ಇನ್ನೇನು ಎರಡೂ ಚಿತ್ರಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಸಂಯುಕ್ತಾಗೆ ತಮಿಳು ಚಿತ್ರವೊಂದರಿಂದ ಆಫ‌ರ್‌ ಬಂದಿದ್ದು, ಅದರ ಸಲುವಾಗಿ ಅವರು ಎರಡೂ ಚಿತ್ರಗಳನ್ನು ಬಿಡುವುದಕ್ಕೆ ಮುಂದಾದರಂತೆ. ಈ ಹಂತದಲ್ಲಿ “ಕಾಲೇಜ್‌ ಕುಮಾರ್‌’ ಚಿತ್ರದ ನಿರ್ಮಾಪಕರು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರೆಗೂ ಹೋಗಿ ಮಾತಾಡಿದ್ದರಿಂದ, ಸಂಯುಕ್ತಾ ಚಿತ್ರದ ನಾಯಕಿಯಾಗಿ ಮುಂದುವರೆದಿದ್ದಾರೆ.

ಆದರೆ, “ವಾಸು – ಪಕ್ಕಾ ಕಮರ್ಷಿಯಲ್‌’ ಚಿತ್ರತಂಡದವರು ಸುಮ್ಮನಾಗಿದ್ದಾರೆ. ಸಂಯುಕ್ತಾ ಅವರನ್ನು ಬಿಟ್ಟುಕೊಟ್ಟು, ಅವರ ಜಾಗಕ್ಕೆ ರಾತ್ರೋ ರಾತ್ರಿ ನಿಶ್ವಿ‌ಕಾ ಎಂಬ ಹೊಸ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ. “ನಾವು ಸಹ ನಿರ್ಮಾಪಕರ ಸಂಘಕ್ಕೆ ಹೋಗಬಹುದಿತ್ತು. ಆದರೆ, ಸಂಯುಕ್ತಾ ಅವರಿಗೆ ಚಿತ್ರದಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದ ಮೇಲೆ ಅವರನ್ನು ಫೋರ್ಸ್‌ ಮಾಡುವುದು ಸರಿಯಾಗಲಿಲ್ಲ.

ಮೇ 3ರಂದು ಫೋಟೋ ಶೂಟ್‌ನಲ್ಲಿ ಸಹ ಸಂಯುಕ್ತಾ ಭಾಗವಹಿಸಿದ್ದರು. ನಾಲ್ಕನೇ ತಾರೀಖು ಬಂದು ತಮಿಳು ಚಿತ್ರದಲ್ಲಿ ಅವಕಾಶ ಸಿಕ್ಕಿರುವುದರಿಂದ, ಚಿತ್ರೀಕರಣ ಮುಂದಕ್ಕೆ ಹಾಕುವುದಕ್ಕೆ ಸಾಧ್ಯವಾ ಎಂದು ಕೇಳಿದರು. ಆದರೆ, ಅಷ್ಟರಲ್ಲಿ ಎಲ್ಲವೂ ಫೀಕ್ಸ್‌ ಆಗಿತ್ತು. ಕಲಾವಿದರ ಕಾಲ್‌ಶೀಟ್‌ ಪಡೆಯುವುದರ ಜೊತೆಗೆ, ಶೂಟಿಂಗ್‌ ಮನೆಯನ್ನು ಸಹ ಬಾಡಿಗೆ ಪಡೆದಾಗಿತ್ತು. ಚಿತ್ರೀಕರಣ ಮುಂದಕ್ಕೆ ಹಾಕಿದ್ದರೆ, ಪ್ಲಾನ್‌ ಹಾಳಾಗುತ್ತಿತ್ತು.

Advertisement

ಅದನ್ನು ಬದಲಾಯಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಹಾಗಾಗಿ ಅವರ ಬದಲು ಬೇರೆ ನಾಯಕಿಯನ್ನು ಆಯ್ಕೆ ಮಾಡಬೇಕಾಯಿತು. ನಮ್ಮ ಗುಡ್‌ ಲಕ್‌ ಎಂದರೆ, ಆಡಿಷನ್‌ ಮಾಡಿದ ಮೊದಲ ಹುಡುಗಿಯೇ ಫಿಕ್ಸ್‌ ಆದರು. ಈಗ ಯಶವಂತಪುರದ ನಿಶ್ವಿ‌ಕಾ ನಾಯ್ಡು ಎನ್ನುವವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ’ ಎನ್ನುತ್ತಾರೆ ಅನೀಶ್‌. ಇನ್ನು “ವಾಸು – ಪಕ್ಕಾ ಕಮರ್ಷಿಯಲ್‌’ ಚಿತ್ರದ ಚಿತ್ರೀಕರಣ ಈಗಾಗಲೇ 8ರಿಂದ ಪ್ರಾರಂಭವಾಗಿದೆ.

ಈ ತಿಂಗಳ 31ರವರೆಗೂ ಚಿತ್ರೀಕರಣ ನಡೆಯಲಿದೆಯಂತೆ. ವಾಸು ಚಿತ್ರವನ್ನು ಅಜಿತ್‌ವಾಸನ್‌ ಅವರೇ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನ ರಚಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದರೆ, ಶ್ರೀಕಾಂತ್‌ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next