ಸಣ್ಣ ರಫ್ತುದಾರರನ್ನು ಪ್ರೋತ್ಸಾಹಿಸಲು, ಉತ್ತೇಜನ ನೀಡಲು ಕೇಂದ್ರ ಸರ್ಕಾರ “ನಿರ್ವಿಕ್’ ಯೋಜನೆಯನ್ನು ಘೋಷಿಸಿದೆ. ಸಣ್ಣ ರಫ್ತುದಾರರಿಗೆ ಕಡಿಮೆ ಪ್ರೀಮಿಯಂನಲ್ಲೇ ಹೆಚ್ಚಿನ ವಿಮಾ ರಕ್ಷಣೆ ನೀಡುವ ಮತ್ತು ಕ್ಲೇಮ್ ಇತ್ಯರ್ಥಕ್ಕೆ ಸರಳ ವಿಧಾನವನ್ನು ಒಳಗೊಂಡ ನಿರ್ವಿಕ್(ನಿರ್ಯಾತ ಋಣ ವಿಕಾಸ ಯೋಜನೆ) ಎಂಬ ಸ್ಕೀಮನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
5 ವರ್ಷದ ಅಂತ್ಯದೊಳಗೆ ಈ ಯೋಜನೆಯು 30 ಲಕ್ಷ ಕೋಟಿ ರೂಪಾಯಿ ರಫ್ತಿಗೆ ಸಹಾಯ ಮಾಡಲಿದೆ ಎಂದೂ ಅವರು ಹೇಳಿದ್ದಾರೆ. ವಾಣಿಜ್ಯ ಸಚಿವಾಲಯವು ಈ ಯೋಜನೆಯನ್ನು ರೂಪಿಸುತ್ತಿದೆ. ಪ್ರಸಕ್ತ ರಫ್ತುದಾರರು ಸಾಮಾನುಗಳನ್ನು ವಿದೇಶಗಳಿಗೆ ರಫ್ತು ಮಾಡಿದಾಗ, ಅವರಿಗೆ ಎಲ್ಲಿಯವರೆಗೂ ಹಣ ಬರುವುದಿಲ್ಲವೋ ಅಲ್ಲಿಯವರೆಗೂ ಡಿಫಾಲ್ಟ್ನ ಅಪಾಯ ಎದುರಿಸಬೇಕಾಗುತ್ತದೆ.
ಈ ಕಾರಣಕ್ಕೆ ರಫ್ತುದಾರರು ವಸ್ತುಗಳಿಗೆ ವಿಮೆ ಮಾಡಿಸಿರುತ್ತಾರೆ. ಈ ವಿಮೆಯ ಪ್ರೀಮಿಯಂ ಇಲ್ಲಿಯವರೆಗೂ ಅಧಿಕವಿದ್ದು, ಈಗ ಈ ಮೊತ್ತವನ್ನು ತಗ್ಗಿಸಲಾಗಿರುವುದು ವಿಶೇಷ. ಇದಷ್ಟೇ ಅಲ್ಲದೇ, ವಿಮೆಯ ಕವರೇಜ್ ಪ್ರಮಾಣ ಇಲ್ಲಿಯವರೆಗೂ 60 ಪ್ರತಿಶತದಷ್ಟಿತ್ತು. ಈಗ ಇದನ್ನು 90 ಪ್ರತಿಶತಕ್ಕೆ ಏರಿಸಲಾಗಿರುವುದು ಚಿಕ್ಕ ವ್ಯಾಪಾರಸ್ಥರಿಗೆ ಸಂತೋಷ ಮೂಡಿಸಿದೆ. ಈ ಸ್ಕೀಮು ಒಂದರ್ಥದಲ್ಲಿ ಭಾರತೀಯ ಸಣ್ಣ ರಫ್ತುದಾರರನ್ನು ಜಾಗತಿಕ ಸ್ಪರ್ಧೆಯಲ್ಲಿ ಬಲಿಷ್ಠಗೊಳಿಸುತ್ತದೆ. ರಫ್ತುವಲಯಕ್ಕೆ ಸಮಯೋಚಿತ ಸಹಾಯ ಮಾಡುತ್ತದೆ.
ಏಕೀಕೃತ ಖರೀದಿ ವ್ಯವಸ್ಥೆ: ಸರ್ಕಾರಿ ಇ-ಮಾರುಕಟ್ಟೆ(ಜಿಇಎಂ) ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ(ಎಂಎಸ್‌ಎಂಇ) ಉತ್ತೇಜನ ನೀಡಲು ನೀಡಲು ಒಂದು ಏಕೀಕೃತ ಖರೀದಿ ವ್ಯವಸ್ಥೆಯನ್ನು ಜಾರಿಗೆ ತರಲು ಯೋಚಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಇಎಂನ ಅಡಿಯಲ್ಲಿ ಈಗಾಗಲೇ 3,24 ಲಕ್ಷ ವ್ಯಾಪಾರಿಗಳಿದ್ದು, ಈ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದೆ.